ನ್ಯೂಸ್

ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ; ಹೋಮ, ಹವನ ಧಾರ್ಮಿಕ ಕಾರ್ಯಕ್ರಮ

Haveri - Kariyappa Aralikatti

ರಾಣೆಬೆನ್ನೂರ: ಪ್ರಧಾನಮಂತ್ರಿಯಾಗಿ ಮೂರನೇ ಬಾರಿಗೆ ಮೋದಿಯವರು ಪ್ರಮಾಣವಚನ ಸ್ವೀಕಾರ ಮಾಡುತ್ತಿರುವ ಇಲ್ಲಿನ ಕುರುಬಗೇರಿಯ ಈಶ್ವರ ದೇವಸ್ಥಾನದಲ್ಲಿ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ಹಾಗೂ ಅಭಿಮಾನಿ ಬಳಗದಿಂದ ಹೋಮ ಹವನ ಮತ್ತು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ಭಾನುವಾರ ಜರುಗಿದವು.
ಸಾರ್ವಜನಿಕರಿಗೆ ಮೋದಿಯವರ ಪ್ರಮಾಣವಚನ ಸ್ವೀಕಾರ ಸಂದರ್ಭದ ವೀಕ್ಷಿಸಲು ಎರಡು ಎಲ್ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ 10 ಸಾವಿರ ಜನರಿಗೆ ಗೋಧಿ ಹುಗ್ಗಿ, ಮುಳಗಾಯಿ ಪಲ್ಯ, ಅನ್ನ ಸಾಂಬಾರ, ಬೀರಂಜಿ ಊಟ ಬಡಿಸಲಾಯಿತು.
ಸೇವಾ ಸಂಸ್ಥೆಯ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ಮಾತನಾಡಿ, ಮೂರನೇ ಬಾರಿಗೆ ಜನರಿಂದ ಆಯ್ಕೆಗೊಂಡ ಏಕೈಕ ಪ್ರಧಾನಿ ನರೇಂದ್ರ ಮೋದಿಜಿಯವರು. ಕಳೆದ ಹತ್ತು ವರ್ಷಗಳಲ್ಲಿ ದೇಶವನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯುವುದರ ಮೂಲಕ ಇಡಿ ವಿಶ್ವವೇ ಭಾರತವನ್ನು ತಿರುಗಿ ನೋಡುವಂತೆ ಮಾಡಿದ್ದಾರೆ. ಇವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ನೋಡಬೇಕೆಂಬ ಹಿಂದುಗಳ ಹಾಗೂ ಅಭಿಮಾನಿಗಳ ಮತ್ತು ಪಕ್ಷದ ಕಾರ್ಯಕರ್ತರ ಆಸೆ ನೆರವೇರಿದೆ ಎಂದರು.
ಮೋದಿಜಿಯವರ ಪ್ರಾಮಾಣಿಕ ಸೇವೆಯನ್ನು ಕಂಡು ಎನ್‌ಡಿಎ ಸೇರಿ ಪಕ್ಷೇತರರು ಬೆಂಬಲ ಸೂಚಿಸಿ ಮೋದಿಯವರನ್ನೇ ಪ್ರಧಾನಮಂತ್ರಿಯಾಗಿ ಮಾಡುವ ಕನಸು ಇಂದು ನನಸಾಗಿಸಿದ್ದಾರೆ. ಮುಂದಿನ ದಿನಮಾನಗಳಲ್ಲಿ ಮೋದಿಯವರ ಆಡಳಿತದಲ್ಲಿ ಯಾವುದೇ ಅಡತಡೆ ಬಾರದೆ, ದೇಶದ ಒಳಿತಿಗಾಗಿ, ಮೋದಿಯವರು ತೆಗೆದುಕೊಳ್ಳುವ ಸ್ಪಷ್ಟ ನಿರ್ಧಾರಕ್ಕೆ ಯಾರದೂ ಅಡ್ಡಿ ಆತಂಕ ಬಾರದೆ ಸುಸೂತ್ರವಾಗಿ ಆಡಳಿತ ನಡೆಸಲಿ ಎಂಬ ಸದುದ್ದೇಶದಿಂದ ಹೋಮ್ ಹವನ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.