ನರೇಗಲ್ಲ: ಗ್ರಾಮೀಣ ಸೊಗಡನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕುಸ್ತಿ ಕ್ರೀಡೆ ಉತ್ತಮ ಪ್ರದರ್ಶನವಾಗಿದ್ದು, ಯುವಕರು ದುಶ್ಚಟಗಳಿಗೆ ಬಲಿಯಾಗದೆ. ಚಟದಿಂದ ದೂರವಿದ್ದು ಹೆಚ್ಚು ಒತ್ತು ನೀಡಿ ಕುಸ್ತಿ ಕ್ರೀಡೆಯನ್ನು ಉಳಿಸಿ ಬೆಳೆಸುವುದು ಅಗತ್ಯವಿದೆ ಎಂದು ನಿವೃತ್ತ ಪ್ರಾಚಾರ್ಯ ಎಂ. ಎಸ್. ಕೋರಿ ಹೇಳಿದರು.
ಅವರು ಸಮೀಪದ ಜಕ್ಕಲಿ ಗ್ರಾಮದ ಶ್ರೀ ಮಾರುತೇಶ್ವರ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಖ್ಯಾತ ಕುಸ್ತಿಯ ಗುರು ದಿ. ಮುಖಪ್ಪಜ್ಜ ಸಂಕನೂರ ಇವರ ೧೫ ನೇ ವರ್ಷದ ಪುಣ್ಯಾರಾಧನೆ ನಿಮಿತ್ತ ನಡೆದ ಪ್ರಖ್ಯಾತ ಪೈಲ್ವಾನರ ಬಯಲು ಕುಸ್ತಿ ಪಂದ್ಯಾವಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಕುಸ್ತಿ ಕ್ರೀಡೆ ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿರುವುದು ಕಳವಳದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಯುವಕರ ನಡಿಗೆ ಕುಸ್ತಿಯ ಕಡೆಗೆ. ಮನೆಗೊಬ್ಬ ಕುಸ್ತಿಪಟುಗಳನ್ನು ತಯಾರಿ ಮಾಡುವ ಕಾರ್ಯವಾಗಬೇಕು ಎಂದರು.
ಮಾಜಿ ಗ್ರಾಪಂ ಸದಸ್ಯ ಪ್ರಕಾಶಪ್ಪ ಹೊಸಮನಿ ಮಾತನಾಡಿ, ರಾಜ ಮಹಾರಾಜರ ಕಾಲದಿಂದಲೂ ಪಾಲನೆ, ಪೋಷಣೆ ಮಾಡಿಕೊಂಡು ಬಂದಿರುವ ಗ್ರಾಮೀಣ ಜನರಿಗೆ ಆಕರ್ಷಕ ಮನರಂಜನೆ ನೀಡುವ ಮೂಲಕ ಕುಸ್ತಿ ಕ್ರೀಡೆ ಇಂದಿಗೂ ಇಲ್ಲಿ ಮಹತ್ವವನ್ನು ಉಳಿಸಿಕೊಂಡು ಬಂದಿರುವುದು ನಮ್ಮೆಲ್ಲರ ಸಂಸ್ಕೃತಿಯ ಪ್ರತೀಕ. ಪ್ರತಿ ವರ್ಷ ಕುಸ್ತಿಪಟುಗಳಿಗೆ ಯೋಗ್ಯ ಬಹುಮಾನ ನೀಡುತ್ತಿರುವುದು ವ್ಯಾಯಾಮ ಶಾಲೆಯ ಪೈಲ್ವಾನರ ಕಾರ್ಯ ಶ್ಲಾಘನೀಯ ಎಂದರು.
ಇತ್ತೀಚೆಗೆ ಮೃತರಾದ ಲಕ್ಕುಂಡಿಯ ಅಂತಾರಾಷ್ಟ್ರೀಯ ಪ್ರಸಿದ್ಧ ಕುಸ್ತಿ ತರಬೇತುದಾರ ದಿ. ಶರಣಪ್ಪ ಬೇಲೇರಿ ಇವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗದಗ, ರೋಣ, ಬಾದಾಮಿ, ಹಳ್ಯಾಳ, ಲಕ್ಕುಂಡಿ, ಗುಜಮಾಗಡಿ, ಬೊಮ್ಮನಹಳ್ಳಿ, ಹುಯಿಲಗೋಳ, ಉಗರಗೋಳ, ಹಿರೇಹಂದಿಗೋಳ, ಹಿರೇವಡ್ಡಟ್ಟಿ, ಬಲಕುಂದಿ ಇನ್ನಿತರೆ ಊರುಗಳಿಂದ ೫೦ಕ್ಕೂ ಹೆಚ್ಚು ಪೈಲವಾನರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ವೀರಯ್ಯ ಹಿರೇಮಠ, ಸುಭಾಸ ಕಡಗದ, ಬಸವರಾಜ ಆದಿ, ಬಸಪ್ಪ ಕೊಪ್ಪದ, ಬಸವರಾಜ ಶ್ಯಾಶೆಟ್ಟಿ, ಚನ್ನಪ್ಪ ಮಡಿವಾಳರ, ಆದರ್ಶ ಕುಲಕರ್ಣಿ, ನಿಂಗಪ್ಪ ಮಡಿವಾಳರ, ಸಂಗಮೇಶ ಮೆಣಸಗಿ, ಸಣ್ಣದ್ಯಾಮಣ್ಣ ಮಡಿವಾಳರ, ಚನ್ನಬಸಪ್ಪ ಸೂಡಿ, ಭೀಮಪ್ಪ ರೋಣದ, ಯಲ್ಲಪ್ಪ ಮಡಿವಾಳರ, ಕಲ್ಲಪ್ಪ ಮರಬಸಪ್ಪನವರ, ಫೀರಸಾಬ ಬಾಲೇಸಾಬನವರ, ಪಿ. ಎ. ಹೊಸಮನಿ, ಸುಭಾಸ ಪಲ್ಲೇದ, ಕುಬೇರಪ್ಪ ಪಲ್ಲೇದ ಸೇರಿದಂತೆ ಇತರರಿದ್ದರು.
ಫಲಿತಾಂಶ: ಅಖಾಡದಲ್ಲಿ ಅಂತಿಮ ಘಟ್ಟದ ಪಂದ್ಯದಲ್ಲಿ ವಿಶೇಷ ಗಮನ ಸೆಳೆದು ರೋಮಾಂಚಕ ಮದ ಗಜಗಳಂತೆ ಸೆಣಸಿದ ಬೊಮ್ಮನಹಳ್ಳಿ ಪರಸುರಾಮ ಎದುರಾಳಿ ಲಕ್ಕುಂಡಿಯ ಮುತ್ತು ಪೈಲ್ವಾನರನ್ನು ಕಸರತ್ತಿನಲ್ಲಿ ಚಿತ್ ಮಾಡುವ ಮೂಲಕ ಪ್ರಥಮ ೭೦೦೧ ರೂ. ನಗದು ಬಹುಮಾನ ಹಾಗೂ ಶೀಲ್ಡ್ ಗಿಟ್ಟಿಸಿಕೊಂಡು ಸಂಭ್ರಮಿಸಿದರು. ದ್ವಿತೀಯ ಬಹುಮಾನವನ್ನು ಜಕ್ಕಲಿಯ ಬಸವರಾಜ ಹಡಪದ ಪೈಲ್ವಾನ್ ಎದುರಾಳಿ ಬೊಮ್ಮನಹಳ್ಳಿಯ ಹನುಮಂತಪ್ಪ ಪೈಲ್ವಾನ ಇವರೊಂದಿಗೆ ವಿವಿಧ ಡಾವುಗಳ ಮೂಲಕ ಸೆಣಸಾಟವಾಡಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿ ೫೦೦೧ರೂ. ನಗದು ಬಹುಮಾನ ಹಾಗೂ ಶೀಲ್ಡ್ ತಮ್ಮದಾಗಿಸಿಕೊಂಡರು. ತೃತೀಯ ಬಹುಮಾನಕ್ಕೆ ಆಟವಾಡಿದ ಲಕ್ಕುಂಡಿಯ ಮುತ್ತು ಪೈಲ್ವಾನ್ ಎದುರಾಳಿ ಜಕ್ಕಲಿಯ ಸುನೀಲ್ ಪೈಲ್ವಾನ್ ಇವರ ನಡುವೆ ನಡೆದ ಜಿದ್ದಾಜಿದ್ದಿ ಏರ್ಪಟ್ಟು ಕೊನೆಯ ಕ್ಷಣದಲ್ಲಿ ಮುತ್ತು ಪೈಲ್ವಾನ್ ಜಯಗಳಿಸಿ ೩೦೦೧ ರೂ. ನಗದು ಬಹುಮಾನ ಹಾಗೂ ಶೀಲ್ಡ್ ಪಡೆದುಕೊಂಡರು.