ನ್ಯೂಸ್

ನರೇಗಾ ಯೋಜನೆಯಿಂದ ರುದ್ರಭೂಮಿ ಅಭಿವೃದ್ಧಿ: 16ಕ್ಕೂ ಅಧಿಕ ಗ್ರಾಮಗಳ ಸ್ಮಶಾನ ಈಗ ಶಾಂತಿಧಾಮವಾಗಿ ಪರಿವರ್ತನೆ

Kolar

ಶ್ರೀನಿವಾಸಪುರ :  ನರೇಗಾ ಯೋಜನೆಯಲ್ಲಿ ತಾಲೂಕಿನ ಗ್ರಾಮಗಳಲ್ಲಿ ಆಯಾಯ ಸಮುದಾಯಗಳಿಗೆ ತಕ್ಕಂತೆ ರುದ್ರಭೂಮಿ ಅಭಿವೃದ್ಧಿಪಡಿಸಲು ತಾಲೂಕಿನ ಶಾಸಕ ರಮೇಶ್ ಕುಮಾರ್ ಹಾಗೂ ತಾಲೂಕು ಪಂಚಾಯಿತಿ ಇಒ ಆನಂದ್ ಮುಂದಾಗಿದ್ದು, 16ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸ್ಮಶಾನಗಳನ್ನು ಶಾಂತಿಧಾಮವಾಗಿ ಪರಿವರ್ತಿಸಿದ್ದಾರೆ.

ಪಟ್ಟಣ ಹೊರತುಪಡಿಸಿದಂತೆ ಗ್ರಾಮೀಣ ಭಾಗದಲ್ಲಿರುವ ಸ್ಮಶಾನ ಅಭಿವೃದ್ಧಿಗೆ ಯಾರೂ ಚಿಂತನೆ ನಡೆಸಿರಲಿಲ್ಲ. ಹಲವು ದಶಕಗಳ ಹಿಂದೆ ಆಯಾ ಗ್ರಾಮದಲ್ಲಿ ಆಯಾ ಸಮುದಾಯಕ್ಕೆ ತಕ್ಕಂತೆ ಸ್ಮಶಾನಗಳಿಗೆ ಜಾಗ ನೀಡಿ, ಆ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತಿದ್ದರು. ಆದರೆ ಆ ಸ್ಮಶಾನಗಳಲ್ಲಿ ಗಿಡ-ಗಂಟಿ ಬೆಳೆದು ಅಂತ್ಯಕ್ರಿಯೆ ಮಾಡಲೂ ಜಾಗ ಇಲ್ಲದಂತಾಗಿತ್ತು.

ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅನುದಾನ ಪಡೆದು ಸ್ಮಶಾನ ಅಭಿವೃದ್ಧಿ ಪಡಿಸಿದ್ದರು. ಹಳ್ಳಿಗಳಲ್ಲಿ ಸ್ಮಶಾನ ಅಭಿವೃದ್ಧಿಗೆ ಅನುದಾನ ಇಲ್ಲದೆ ಇದ್ದಿದ್ದರಿಂದ ಅವುಗಳನ್ನು ಅಭಿವೃದ್ಧಿಪಡಿಸುವ ಚಿಂತನೆಯನ್ನು ಯಾರೂ ನಡೆಸಿರಲಿಲ್ಲ.

ಗ್ರಾಮಗಳಲ್ಲಿ ರಸ್ತೆ, ಚರಂಡಿ ಸೇರಿ ಮೂಲ ಸೌಲಭ್ಯಗಳ ಕಡೆ ಗಮನ ಹರಿಸಿದ ಶಾಸಕ ರಮೇಶ್ ಕುಮಾರ್ ಸ್ಮಶಾನಗಳ ಅಭಿವೃದ್ಧಿಯನ್ನು ನರೇಗಾ ಯೋಜನೆಯಲ್ಲಿ ಕೈಗೆತ್ತಿಕೊಳ್ಳಬೇಕೆಂದು ಎಲ್ಲ ಸ್ಮಶಾನಗಳ ಸರ್ವೇ ಕಾರ್ಯ ಮಾಡಬೇಕು ಎಂದು ತಹಸೀಲ್ದಾರ್ ಶ್ರೀನಿವಾಸ್ ಹಾಗೂ ಇಒ ಎಸ್. ಆನಂದ್ ಅವರಿಗೆ ಜವಾಬ್ದಾರಿ ನೀಡಿದ ಸಲುವಾಗಿ ತಾಲೂಕಿನ ಎಲ್ಲ ಗ್ರಾಮಗಳ ಸ್ಮಶಾನ ಸರ್ವೇ ಕಾರ್ಯ ಮುಗಿದಿದೆ.

ನರೇಗಾ ಯೋಜನೆಯಲ್ಲಿ 40 ಗ್ರಾಮಗಳ ಸ್ಮಶಾನಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, 16 ಗ್ರಾಮಗಳಲ್ಲಿ ಸ್ಮಶಾನಗಳಿಗೆ ತಂತಿಬೇಲಿ ಅಳವಡಿಸಿ ಮುಂಭಾಗ ಕಾಂಪೌಂಡ್ ನಿರ್ಮಿಸಿ ಎಲ್ಲ ಸೌಲಭ್ಯ ಒದಗಿಸಲಾಗುತ್ತಿದೆ.

ವಿಸ್ತೀರ್ಣಕ್ಕೆ ತಕ್ಕಂತೆ 5ರಿಂದ 20 ಲಕ್ಷ ರೂ.ನಂತೆ ನರೇಗಾ ಯೋಜನೆಯಲ್ಲಿ ಪ್ರತಿ ಗ್ರಾಮದಲ್ಲಿ ಸ್ಮಶಾನ ಅಭಿವೃದ್ಧಿಪಡಿಸಲಾಗುತ್ತಿದೆ. ಸುತ್ತ ತಂತಿಬೇಲಿ ಹಾಗೂ ಕಾಂಪೌಂಡ್ ನಿರ್ಮಿಸಲಾಗಿದೆ. ನೀರಿಗಾಗಿ ತೊಟ್ಟಿ ನಿರ್ಮಿಸಲಾಗಿದೆ. ಆನಂದ್, ಇಒಎಸ್ , ಶ್ರೀನಿವಾಸಪುರ