ನ್ಯೂಸ್

ನರೇಗಾದಡಿ ಬಹು ಕೋಟಿ ರೂ. ಅಕ್ರಮ: ರಾಜೀವ್ ಆರೋಪ | Investigation urge

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಕಾಮಗಾರಿಗಳಲ್ಲಿ ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅಕ್ರಮವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ.ರಾಜೀವ್ ಆರೋಪಿಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಹಾರದ ವೈಖರಿಯನ್ನು ವಿವರಿಸಿ, ದಾಖಲೆಗಳ ಪ್ರತಿಗಳನ್ನು ಬಿಡುಗಡೆ ಮಾಡಿದರು. ಜತೆಗೆ ೆಟೊಗಳ ಪುರಾವೆಗಳನ್ನು ಪ್ರದರ್ಶಿಸಿದರು.

ರಾಜ್ಯದ ಆರು ಸಾವಿರ ಗ್ರಾ.ಪಂ.ಗಳ ಪೈಕಿ ಒಂದು ಸಾವಿರ ಗ್ರಾ.ಪಂ.ಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 10 ರಿಂದ 17 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಲೋಕಾಯುಕ್ತ ಸಂಸ್ಥೆಗೆ ದೂರು ಸಲ್ಲಿಸಿದ್ದು, ಆಯಾ ಜಿಲ್ಲೆಗಳಲ್ಲಿ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ, ರಾಷ್ಟ್ರೀಯ ವಿಚಾರಗಳನ್ನು ಮಾತನಾಡುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸ್ವಲ್ಪ ಪುರುಸೊತ್ತು ಮಾಡಿಕೊಂಡು ಇಲಾಖೆ ಕಡೆ ಗಮನಹರಿಸಬೇಕು. ಹೊರಗೆಳೆದ ದಾಖಲೆಗಳೆಲ್ಲ ಸುಳ್ಳು, ನಾನು ಮಾಡಿದ ಆರೋಪ ನಿರಾಧಾರವೆಂದು ಸಾಬೀತುಪಡಿಸಬೇಕು. ಇಲ್ಲವೇ ತನಿಖೆಗೆ ಆದೇಶಿಸಿ ಕ್ರಮಕೈಗೊಳ್ಳಬೇಕು ಎಂದು ಪಿ.ರಾಜೀವ್ ಸವಾಲು ಹಾಕಿದರು.

ಆದಾಯವೆಲ್ಲ ಸೋರಿಕೆ

ರಾಜ್ಯ ಸರ್ಕಾರ ಹೆಚ್ಚಿಸಿರುವ ತೆರಿಗೆಗಳ ಮೂಲಕ ಆದಾಯವೂ ಹೆಚ್ಚಿದೆ. ಗ್ರಾಮೀಣಾಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆಯಾಗುತ್ತಿದೆ. ಆದರೆ ಗ್ಯಾರಂಟಿಗಳ ಹೆಸರಿನಲ್ಲಿ ಬಹು ಕೋಟಿ ರೂ.ಗಳು ಸೋರಿಕೆಯಾಗುತ್ತಿದೆ. ಇದು, ಎಷ್ಟು ಪರ್ಸೆಂಟ್ ಕಮಿಷನ್ ಸರ್ಕಾರವೆಂದು ಇಲಾಖೆ

ಸಚಿವರೇ ನಿರ್ಧರಿಸಬೇಕು ಎಂದು ಕುಟುಕಿದರು.

ಉದ್ಯೋಗ ಖಾತ್ರಿ ಯೋಜನೆ ಹಾಗೂ 15ನೇ ಹಣಕಾಸು ಆಯೋಗದ ಅನುದಾನವನ್ನು ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ನರೇಗಾ ಎನ್‌ಎಂಆರ್, 15ನೇ ಹಣಕಾಸು ಆಯೋಗದ ಹಣದಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದೇವೆ ಎಂದು ತೋರಿಸಿದ ದಾಖಲೆ, ಭೌತಿಕವಾಗಿ ಸ್ಥಳ ಪರಿಶೀಲಿಸಿದರೆ ಭ್ರಷ್ಟಾಚಾರದ ದರ್ಶನವಾಗಲಿದೆ ಎಂದರು.

ಅಕ್ರಮಕ್ಕೆ ನಿದರ್ಶನ

ಲೋಕೋಪಯೋಗಿ ಇಲಾಖೆಯು ತಲಾ ಐದು ಲಕ್ಷ ರೂ. ವೆಚ್ಚದಲ್ಲಿ ರಸ್ತೆಗಳ ಡಾಂಬರೀಕರಣ ಮಾಡಿದೆ. ಬಿಲ್ ಕೂಡ ಪಾವತಿಸಿದ್ದು, ಇದೇ ರಸ್ತೆಗಳನ್ನು ನರೇಗಾದಡಿ ಸುಧಾರಿಸಿದ್ದೇವೆ ಎಂದು ದಾಖಲಿಸಿ 2.50 ಲಕ್ಷ ರೂ. ಎತ್ತುವಳಿ ಮಾಡಲಾಗಿದೆ.

15ನೇ ಹಣಕಾಸು ಆಯೋಗದ ಅನುದಾನಡಿ ಕೈಗೆತ್ತಿಕೊಂಡ ಕಾಮಗಾರಿಗಳ ಜಿಪಿಎಸ್ಟೊಫೋಟೊಗಳನ್ನು ಮೂರು ಹಂತದಲ್ಲಿ ಅಪ್‌ಲೋಡ್ ಮಾಡಬೇಕು. ಆದರೆ ಎಲ್ಲೋ ಕುಳಿತು ಗೂಗಲ್ ನಕ್ಷೆಯ ಫೋಟೊಗಳನ್ನು ಅಪ್‌ಲೋಡ್ ಮಾಡಿ, ಕಾಮಗಾರಿ ಪೂರ್ಣಗೊಂಡಿದೆ ಎಂದು ಬಿಂಬಿಸಿ ಹಣ ಪಾವತಿಸಲಾಗಿದೆ.

ನರೇಗಾ ಕಾಮಗಾರಿಗೆ ಮಹಿಳೆಯರು ಬಂದಿದ್ದಾರೆ ಎಂದು ತೋರಿಸಲು ಪುರುಷರಿಗೆ ಸೀರೆ ಉಡಿಸಿ ಫೋಟೊ ತೆಗೆದು ಅಪ್ ಲೋಡ್ ಮಾಡಿರುವ ಪುರಾವೆ ಯಾದಗಿರಿ ಜಿಲ್ಲೆಯಲ್ಲಿ ಸಿಕ್ಕಿವೆ. ವಿಜಯಪುರ ಜಿಲ್ಲೆಯಲ್ಲಿ ಶಾಲಾ ಮಕ್ಕಳನ್ನು ನಿಲ್ಲಿಸಿ ಫೋಟೊ ತೆಗೆಯಿಸಿ ನರೇಗಾ ಕೂಲಿ ಮೊತ್ತ ಪಾವತಿಸಲಾಗಿದೆ.

ಈ ಫೋಟೊದಲ್ಲಿರುವ ಮಕ್ಕಳು ಬೇರೆ, ನರೇಗಾ ಕೂಲಿ ಮೊತ್ತ ಪಾವತಿಸಿದ ಜಾಬ್‌ಕಾರ್ಡ್, ಫಲಾನುಭವಿಯೇ ಬೇರೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಕೆಲವು ಜನರನ್ನು ಗುತ್ತಿಗೆ ಪಡೆದು, ನೂರಾರು ಕಾಮಗಾರಿಗಳ ಸ್ಥಳಕ್ಕೆ ಕರೆದೊಯ್ದಿದ್ದು, ನರೇಗಾ ಕೂಲಿಕಾರರು ಎಂಬಂತೆ ಫೋಟೊಗಳನ್ನು ಅಪ್‌ಲೋಡ್ ಮಾಡಲಾಗಿದೆ.

ಫೋಟೊಟೊಗಳಲ್ಲಿರುವ ವ್ಯಕ್ತಿಗಳು ಒಂದೇ, ನೂರಾರು ಕಾಮಗಾರಿಗಳಾಗಿವೆ. ಆದರೆ ಬೇರೆ ಬೇರೆ ಜಾಬ್‌ಕಾರ್ಡ್‌ಗಳಿಗೆ ಇವೇ ಫೋಟೊಗಳನ್ನು ಬಳಸಿಕೊಂಡು ಕೂಲಿ ಮೊತ್ತ ಪಾವತಿಸಲಾಗಿದೆ. ಶ್ರೀಮಂತರು, ಕಾರು ಮತ್ತಿತರ ವಾಹನಗಳುಳ್ಳ ವ್ಯಕ್ತಿಗಳ ಹೆಸರಿನಲ್ಲಿ ಜಾಬ್‌ಕಾರ್ಡ್‌ಗಳನ್ನು ಸೃಷ್ಟಿಸಲಾಗಿದೆ ಎಂದು ಅವ್ಯವಹಾರದ ಸ್ವರೂಪವನ್ನು ಪಿ.ರಾಜೀವ್ ವಿವರಿಸಿದರು.