ಮೈಸೂರು : ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಯಲ್ಲಿ ಪ್ರತಿ ಅರ್ಹ ಕುಟುಂಬದ ಗರಿಷ್ಠ ಮೊತ್ತವನ್ನು 2.50 ಲಕ್ಷದಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದ್ದು ಗ್ರಾಮೀಣರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ನವೀನ್‌ಕುಮಾರ್ ತಿಳಿಸಿದರು.
ತಾಲೂಕಿನ ಉದ್ದೂರ್‌ಕಾವಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದ್ದ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನದಡಿ ಕೈಗೊಂಡಿರುವ ಮನೆ ಮನೆ ಜಾಥಾ ಹಾಗೂ ಕ್ಯು ಆರ್ ಕೋಡ್ ಅಂಟಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನರೇಗಾ ಯೋಜನೆಯಡಿ ಕೂಲಿಕಾರರಿಗೆ ಅಕುಶಲ ಕೆಲಸ ಒದಗಿಸುವುದರ ಜತೆಗೆ ಅರ್ಹ ಫಲಾನುಭವಿಗಳ ಜೀವನಾಧಾರಕ್ಕೆ ನೆರವಾಗುವ ವೈಯಕ್ತಿಕ ಆಸ್ತಿಗಳನ್ನು ಸೃಜಿಸಿ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವ ಉದ್ದೇಶದಿಂದ ಜೀವತಾವಧಿಯ ಹಣವನ್ನು ಸರ್ಕಾರ ಏರಿಕೆ ಮಾಡಿದೆ.
ಮುಂದಿನ ಆರ್ಥಿಕ ವರ್ಷದ ಕ್ರಿಯಾ ಯೋಜನೆ ತಯಾರಿಕೆಗಾಗಿ ನರೇಗಾ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಬೇಡಿಕೆಯನ್ನು ಪಡೆಯಲಾಗುತ್ತಿದ್ದು, ಗ್ರಾಮಸ್ಥರು ಇದರ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನದಡಿ ಕೈಗೊಂಡಿರುವ ಮನೆ ಮನೆ ಜಾಥಾ ಹಾಗೂ ಮನೆ ಮನೆಗಳಿಗೆ ಕ್ಯೂ ಆರ್ ಕೋಡ್ ಅಂಟಿಸುವ ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಗ್ರಾಪಂ ಅಧ್ಯಕ್ಷೆ ಮುಬಾರಕ್ ಬಾನು ಚಾಲನೆ ನೀಡಿದರು. ಪ್ರಚಾರ ವಾಹನ ಪಂಚಾಯಿತಿ ವ್ಯಾಪ್ತಿಯ ಗೌರಿಪುರ, ನಂಜಾಪುರ, ಹೊಸಕೋಟೆ ಕಾಲೋನಿ, ಹೊನ್ನಿಕುಪ್ಪೆ ಕಾಲನಿ, ರತ್ನಪುರಿ ಬ್ಯಾಡರಹಳ್ಳಿ ಕಾಲೊನಿ ಗ್ರಾಮಗಳಿಗೆ ತೆರಳಿ ನರೇಗಾ ಯೋಜನೆ ಕುರಿತು ಪ್ರಚಾರ ನಡೆಸಲಾಯಿತು.
ತಾಲೂಕು ಐಇಸಿ ಸಂಯೋಜಕಿ ಪುಷ್ಪಾ, ಗ್ರಾಪಂ ಸದಸ್ಯರಾದ ಗೌರಮ್ಮ ಶಂಕರ್, ರಾಮಭೋವಿ, ಗೋವಿಂದ ಶೆಟ್ಟಿ, ಮಾಜಿ ಸದಸ್ಯ ಮಹಮ್ಮದ್ ರಫೀಕ್, ಗ್ರಾಮದ ಮುಖಂಡರಾದ ಶಂಕರನಾಯಕ, ಮರೀಗೌಡ ಸೇರಿದಂತೆ ಪಂಚಾಯಿತಿ ಸಿಬ್ಬಂದಿ ಇದ್ದರು.