ನ್ಯೂಸ್

ಸದಸ್ಯರ ಇಚ್ಛಾನುಸಾರ ನರೇಗಾ ಬೇಡ: ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸಂಸದ ಡಿ.ಕೆ. ಸುರೇಶ್ ಖಡಕ್ ಸೂಚನೆ

Ramanagara

ಚನ್ನಪಟ್ಟಣ : ನರೇಗಾ ಯೋಜನೆಯ ದುರುಪಯೋಗ ಸಹಿಸಲು ಸಾಧ್ಯವಿಲ್ಲ.., ದಳ, ಕಾಂಗ್ರೆಸ್, ಬಿಜೆಪಿ ಎಂಬ ಪಕ್ಷಪಾತವೇ ಸುಳಿಯಬಾರದು.., ಸದಸ್ಯರ ಇಚ್ಛಾನುಸಾರ ಕಾಮಗಾರಿ ನಡೆಸಬೇಡಿ.., ಸದಸ್ಯರಿಗೂ ಯೋಜನೆಗೂ ಸಂಬಂಧವೇ ಇಲ್ಲ.., ಗ್ರಾಮಗಳ ಅಭಿವೃದ್ಧಿಗೆ ಸಮರ್ಪಕವಾಗಿ ನರೇಗಾ ಯೋಜನೆಯನ್ನು ಬಳಸಿಕೊಳ್ಳಿ ಎಂದು ಗ್ರಾಪಂ ಪಿಡಿಒಗಳಿಗೆ ಸಂಸದ ಡಿ.ಕೆ. ಸುರೇಶ್ ಸೂಚಿಸಿದರು.

ನಗರದ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ನರೇಗಾ, ಜಲಜೀವನ್ ಮಿಷನ್ ಸೇರಿದಂತೆ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಈ ತಿಂಗಳ ಕೊನೆಯಲ್ಲಿ ಉಳಿಕೆ ಜಾಬ್‌ಕಾರ್ಡ್‌ಗಳನ್ನು ವಿತರಿಸಬೇಕು. ಯೋಜನೆ ದುರುಪಯೋಗಕ್ಕೆ ಅವಕಾಶ ನೀಡಬಾರದು. ಯೋಜನೆಯ ವೈಯಕ್ತಿಕ ಮತ್ತು ಸಮುದಾಯದ ಕಾಮಗಾರಿಯಲ್ಲಿ ಯಾವುದೇ ಪಕ್ಷಪಾತ ನಡೆಸಬಾರದು. ಗ್ರಾಪಂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಅನುಷ್ಠಾನಗೊಳಿಸಬೇಕೇ ವಿನಹ, ಸದಸ್ಯರ ಇಚ್ಛಾನುಸಾರ ಕಾಮಗಾರಿಗಳು ನಡೆಯಬಾರದು ಎಂದು ಖಡಕ್ ಸೂಚನೆ ನೀಡಿದರು.

ಕೋವಿಡ್ ಸಂಕಷ್ಟದ ಕಾಲದಲ್ಲಿ ಹಲವರು ತಮ್ಮ ಉದ್ಯೋಗ ತೊರೆದು ಹಳ್ಳಿಗಳನ್ನು ಆಶ್ರಯಿಸಿದ್ದಾರೆ. ಆ ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ಪ್ರತಿಯೊಂದು ಮನೆಗಳಲ್ಲಿ ಸರ್ವೇ ಮಾಡಿ ದುಡಿಯುವ ಹೆಣ್ಣು ಮಕ್ಕಳಿಗೂ ಹೆಚ್ಚಿನ ಕೆಲಸ ನೀಡಬೇಕು. ರೈತರಿಗೆ ಅನುಕೂಲವಾಗುವಂತೆ ಕಾರ್ಯಯೋಜನೆ ರೂಪಿಸಬೇಕು ಎಂದು ಕರೆನೀಡಿದರು.

ಕೆರೆ ಒತ್ತುವರಿ ತೆರವುಗೊಳಿಸಿ: ವೈಯಕ್ತಿಕ ಕಾಮಗಾರಿಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು.

ರೈತರಿಗೆ ಅನುಕೂಲವಾಗುವ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಬೇಕು. ನಿಮ್ಮ ಗ್ರಾಪಂಗಳ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಕೆರೆಕುಂಟೆಗಳ ತೆರವುಗೊಳಿಸಿ ಅವುಗಳನ್ನು ಅಭಿವೃದ್ಧಿಗೊಳಿಸಲು ಮುಂದಾಗಿ ಎಂದು ಸಂಸದ ಸುರೇಶ್ ಸೂಚಿಸಿದರು.

ಜಿಪಂ ಸಿಇಒ ಇಕ್ರಂ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯ ಮಾಹಿತಿಯನ್ನು ಅಧಿಕಾರಿಗಳಿಂದ ಕಲೆಹಾಕಿದರು. ಕಾಮಗಾರಿ ನಡೆಯುವ ವೇಳೆ ಯಾವುದೇ ರಸ್ತೆ ಮತ್ತು ಚರಂಡಿ ಹಾಳಾದರೆ, ಅದನ್ನು ಸರಿಪಡಿಸುವುದು ಸಂಬಂಧಪಟ್ಟ ಗುತ್ತಿಗೆದಾರರ ಕೆಲಸ. ಇದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಎಲ್.ನಾಗೇಶ್, ತಾಪಂ ಇಒ ಚಂದ್ರು ಹಾಗೂ ಎಲ್ಲಾ ಗ್ರಾಪಂಗಳ ಪಿಡಿಒಗಳು ಉಪಸ್ಥಿತರಿದ್ದರು.