ನ್ಯೂಸ್

ನಾರಾಯಣಪುರ ಜಲಾಶಯದ ಹಿನ್ನೀರಿಗೆ ಇಳಿದ ಬಾಲಕನನ್ನು ಎಳೆದೊಯ್ದ ಮೊಸಳೆ: ಇನ್ನು ಪತ್ತೆಯಾಗಿಲ್ಲ ಶವ

kumarvrl

ರಾಯಚೂರು: ನಾರಾಯಣಪುರ ಜಲಾಶಯ (ಬಸವ ಸಾಗರ)ಯದ ಹಿನ್ನೀರಿನಲ್ಲಿ ಸ್ನಾನ ಮಾಡಲು ತೆರಳಿದ ಬಾಲಕ ಮೊಸಳೆ ಪಾಲಾಗಿದ್ದಾನೆ.

ಚಿತ್ತಾಪುರ ಗ್ರಾಮದ ಮಂಜುನಾಥ (16)ನನ್ನು ಮೊಸಳೆ ಎಳೆದೊಯ್ದಿದೆ. ಚಿತ್ರಾಪುರ ಗ್ರಾಮದ ಮಂಜುನಾಥ ಭಾನುವಾರ ಬೆಳಗ್ಗೆ ಕೃಷ್ಣ ನದಿಗೆ ಅಡ್ಡವಾಗಿ ನಿರ್ಮಿಸಿರುವ ಜಲಾಶಯದ ಹಿನ್ನೀರಿನಲ್ಲಿ ಸ್ನಾನ ಮಾಡಲು ತೆರಳಿದ್ದ. ಹಿನ್ನೀರಿನಲ್ಲಿ ಅಲ್ಪ ದೂರ ತೆರಳಿದ ನಂತರ ಮೊಸಳೆ ಆತನನ್ನು ಹಿಡಿಯಿತು. ಈ ವೇಳೆ ಆತ ರಕ್ಷಣೆಗಾಗಿ ಕೂಗಿಕೊಂಡ. ಕೂಡಲೇ ಸ್ಥಳದಲ್ಲಿದ್ದ ನಾಗರಿಕರು ಆಗಮಿಸುವಷ್ಟರಲ್ಲಿ ಮೊಸಳೆ ಆತನನ್ನು ಹಿಡಿದು ನೀರಿನಲ್ಲಿ ಮುಳುಗಿತು.

ಗ್ರಾಮಸ್ಥರು ಬಾಲಕನ ಶವ ಪತ್ತೆಗಾಗಿ ಜಲಾಶಯದ ಹಿನ್ನೀರಿನಲ್ಲಿ ಶೋಧ ನಡೆಸುತ್ತಿದ್ದಾರೆ. ಇನ್ನು ಶವ ಪತ್ತೆಯಾಗಿಲ್ಲ. ಮೊಸಳೆ ಬಾಲಕನನ್ನು ಹಿಡಿದು ಜಲಾಶಯದ ಆಳದ ಪ್ರದೇಶಕ್ಕೆ ತೆರಳಿರಬಹುದು ಎಂಬ ಶಂಕೆ ಗ್ರಾಮಸ್ಥರಲ್ಲಿ ವ್ಯಕ್ತವಾಗಿದೆ. (ದಿಗ್ವಿಜಯ ನ್ಯೂಸ್​)