ನ್ಯೂಸ್

ನಾರಾಯಣಮೂರ್ತಿ ಧ್ವನಿ ಬಳಕೆ; ಸೈಬರ್ ವಂಚನೆ

ಬೆಂಗಳೂರು: ಫೆಸ್‌ಬುಕ್‌ನಲ್ಲಿ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ಧ್ವನಿಯನ್ನು ಬಳಸಿ ಟ್ರೇಡಿಂಗ್ ವ್ಯವಹಾರಕ್ಕೆ 67.11 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡು ಸೈಬರ್ ಕಳ್ಳರು ವಂಚನೆ ಮಾಡಿದ್ದಾರೆ.

ಬನಶಂಕರಿ 2ನೇ ಹಂತದ ಕೆ.ಜಿ. ವೇಣಾ, ಈ ಕುರಿತು ದಕ್ಷಿಣ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾರಾಯಣಮೂರ್ತಿ ಧ್ವನಿಯಲ್ಲಿ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಜಾಹೀರಾತು ನೀಡಿದ್ದರು.

ಇದನ್ನು ನಂಬಿದ ಮಹಿಳೆ, ಅಪರಿಚಿತ ವ್ಯಕ್ತಿಗಳು ನೀಡಿದ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ಹಂತ ಹಂತವಾಗಿ ₹67.11 ಲಕ್ಷ ಹೂಡಿಕೆ ಮಾಡಿದ್ದಾರೆ. ಕೊನೆಗೊಂದು ದಿನ ಅಪ್ಲಿಕೇಷನ್ ಸರ್ವರ್ ಸ್ಥಗಿತವಾಗಿದ್ದು, ನೊಂದ ಮಹಿಳೆ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.