ಶಿವಮೊಗ್ಗ: ಅರಣ್ಯಾಧಿಕಾರಿಗಳು ಕರ್ತವ್ಯದ ನೆಪದಲ್ಲಿ ಅನಗತ್ಯವಾಗಿ ರೈತರಿಗೆ ಕಿರುಕುಳ ನೀಡಿದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಎಚ್ಚರಿಸಿದರು.
ಸಾಗರ ತಾಲೂಕು ಉರುಳುಗಲ್ಲು ಗ್ರಾಮದಲ್ಲಿ ಯುವಕರು ಮರ ಕಡಿದಿದ್ದಾರೆಂದು ಅವರ ಮೇಲೆ ಅರಣ್ಯಾಧಿಕಾರಿಗಳು ದಾಖಲಿಸಿರುವ ದೂರಿನ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ದೂರಿನ ಹಿಂದೆ ದುರುದ್ಧೇಶವಿದ್ದರೆ ನಿಶ್ಚಿತವಾಗಿ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಶನಿವಾರ ಕೆಡಿಪಿ ಸಭೆಯಲ್ಲಿ ತಿಳಿಸಿದರು.
ಇಡೀ ಪ್ರಕರಣದ ಬಗ್ಗೆ ಆರ್‌ಎಫ್‌ಒಗೆ ನೋಟಿಸ್ ನೀಡಿ ಅಲ್ಲಿಂದ ಉತ್ತರ ಪಡೆಯಬೇಕು. ಸ್ಥಳೀಯರ ವಿರುದ್ಧ ವೃಥಾ ದೂರು ದಾಖಲಾಗಿದ್ದರೆ ಅಧಿಕಾರಗಳ ಮೇಲೆ ಕ್ರಮಕ್ಕೆ ಶಿಫಾರಸ್ಸು ಮಾಡಿ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಸೆಳೆದ ಶಾಸಕ ಹರತಾಳು ಹಾಲಪ್ಪ, ಉರುಳುಗಲ್ಲು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗಾಗಿ ಶ್ರಮಧಾನ ಮಾಡಿದವರು ರಸ್ತೆ ಮೇಲೆ ಬಿದ್ದಿದ್ದ ಮರವನ್ನು ತೆರವು ಮಾಡಿದ್ದಾರೆ. ಅವರೇನು ಮರವನ್ನು ಮನೆಗೆ ತೆಗೆದುಕೊಂಡು ಹೋಗಿಲ್ಲ. ಆದರೂ ಮರ ಕಡಿತಲೆ ಮಾಡಿದ ಆರೋಪದ ಮೇಲೆ 11 ಜನರ ವಿರುದ್ಧ ಅರಣ್ಯಾಧಿಕಾರಿಗಳು ದೂರು ದಾಖಲಿಸಿದ್ದಾರೆ. ಮೂವರನ್ನು ಬಂಧಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಜಿಪಂ ಸಿಇಒ ಎಂ.ಎಲ್.ವೈಶಾಲಿ, ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಉಪಸ್ಥಿತರಿದ್ದರು. ಶಾಸಕರಾದ ಕುಮಾರ್ ಬಂಗಾರಪ್ಪ, ಕೆ.ಬಿ.ಅಶೋಕ್‌ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್ ಭಾಗವಹಿಸಿದ್ದರು.