Narayana Baramani: ಧಾರವಾಡ ಎಎಸ್ಪಿ ಆಗಿದ್ದ ನಾರಾಯಣ ಬರಮನಿಗೆ ಇದೀಗ ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಬಡ್ತಿ ನೀಡಿ ರಾಜ್ಯ ಸರ್ಕಾರ ಗುರುವಾರ(ಜು.17) ವರ್ಗಾವಣೆಗೊಳಿಸಿದೆ.
ಎಪ್ರಿಲ್ 28ರಂದು ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಎಎಸ್ಪಿಯಾಗಿದ್ದ ನಾರಾಯಣ ಬರಮನಿಯವರ ಮೇಲೆ ಕೈ ಎತ್ತಲು ಮುಂದಾಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಸಮಾವೇಶದಲ್ಲಿ 5-6 ಬಿಜೆಪಿ ಮಹಿಳಾ ಕಾರ್ಯಕರ್ತರು ನುಗ್ಗಿ ದಾಂಧಲೆ ಮಾಡಿದ್ದರಿಂದ ವೇದಿಕೆ ಮೇಲೆ ಕರೆದು ಸಿಟ್ಟಾಗಿ ಕೈ ಎತ್ತಿದ್ದರು ಎಂದು ಸಿಎಂ ಮತ್ತು ಕಾಂಗ್ರೆಸ್ ಪಕ್ಷ ಸಮರ್ಥನೆ ಮಾಡಿಕೊಂಡಿದ್ದರು.
ಇನ್ನು ಈ ವಿಡಿಯೋ ದೇಶದ್ಯಾಂತ ವೈರಲ್ ಆದ ಬೆನ್ನಲ್ಲೇ, ಮನನೊಂದ ಎಎಸ್ಪಿ ನಾರಾಯಣ ಬರಮನಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ ನಡೆಸಿದ್ದವು. ಇದಾದ ಬೆನ್ನಲ್ಲೇ, ನಾರಾಯಣ ಬರಮನಿಗೆ ದೂರವಾಣಿ ಕರೆ ಮಾಡಿ ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಗೃಹಸಚಿವ ಡಾ.ಜಿ.ಪರಮೇಶ್ವರ್, "ಸ್ವಯಂನಿವೃತ್ತಿ ನಿರ್ಧಾರ ಬೇಡ. ಅದನ್ನು ವಾಪಸ್ ಪಡೆಯಿರಿ. ನಾನು ಅಂದು ಉದ್ದೇಶ ಪೂರ್ವಕವಾಗಿ ಆ ರೀತಿ ಮಾಡಿಲ್ಲ. ನಿಮಗೆ ಅಗೌರವ ತೋರಬೇಕು ಎಂದು ಮಾಡಿದ್ದಲ್ಲ. ಅಪಮಾನ ಮಾಡುವ ಉದ್ದೇಶ ನನಗಿರಲಿಲ್ಲ" ಎಂದು ಸಿಎಂ ಮನವರಿಕೆ ಮಾಡಿದ್ದರು.
ಇದೆಲ್ಲಾ ಬೆಳವಣಿಗೆ ನಡೆದ ಬಳಿಕ ಇದೀಗ ನಾರಾಯಣ ಬರಮನಿಗೆ ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಬಡ್ತಿ ನೀಡಿ ಆದೇಶಿಸಿದೆ.