ನಂಜನಗೂಡು: ಭಾರತ ಹುಣ್ಣಿಮೆ ಅಂಗವಾಗಿ ಭಾನುವಾರ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಗಿ, ಭಕ್ತರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಮುಂಜಾನೆ 4 ಗಂಟೆಗೂ ಮುಂಚೆಯೇ ಜಮಾಯಿಸಿದ್ದ ಭಕ್ತರು ಸಾಲಿನಲ್ಲಿ ನಿಂತಿದ್ದರು. ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿಸಿ ದರ್ಶನಕ್ಕೆ ಅನುವು ಮಾಡಿಕೊಡುತ್ತಿದ್ದಂತೆ ಭಕ್ತರು ದರ್ಶನಕ್ಕಾಗಿ ಮುಗಿ ಬೀಳಲು ಆರಂಭಿಸಿದರು. ವಿಶೇಷ ಕೌಂಟರ್ ಸುತ್ತ ಜನಜಂಗುಳಿಯಾದ್ದರಿಂದ ಕೌಂಟರ್‌ನತ್ತ ಸಿಬ್ಬಂದಿ ತೆರಳಲು ಆಗದೇ ಟಿಕೆಟ್ ವಿತರಣೆ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಟಿಕೆಟ್‌ಗಾಗಿ ಕಾದು ನಿಂತಿದ್ದ ಭಕ್ತರು ರೊಚ್ಚಿಗೆದ್ದು ಮಹಿಳೆಯರಾದಿಯಾಗಿ ಬ್ಯಾರಿಕೇಡ್ ಹಾರಿ ಒಳ ನುಸುಳಲು ಮುಂದಾದರು.
ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಲಘು ಲಾಠಿ ಪ್ರಹಾರ ನಡೆಸಬೇಕಾದ ಅನಿವಾರ್ಯತೆ ಎದುರಾಯಿತು. ಈ ವೇಳೆ ಬಿಗುವಿನ ವಾತಾವರಣ ಉಂಟಾಗಿ ಭಕ್ತರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ವಾಗ್ವಾದ ಏರ್ಪಟ್ಟಿತು. ಭಕ್ತರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಯಿಂದ ಸಾಧ್ಯವಾಗದೇ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಆಡಳಿತ ಮಂಡಳಿ ಕೈಕಟ್ಟಿ ಕೂರುವಂತಾಗಿ ಭಕ್ತರ ಸಂದಣಿ ಹೆಚ್ಚಾಗಿ ಗರ್ಭಗುಡಿಯಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ಈ ವೇಳೆ ಅನೇಕ ಭಕ್ತರಿಗೆ ಸಣ್ಣಪುಟ್ಟ ಗಾಯಗಳೂ ಆದವು ಎನ್ನಲಾಗಿದೆ.
ಇನ್ನು ವಿಶೇಷ ಕೌಂಟರ್‌ನಲ್ಲಿ ಟಿಕೆಟ್ ವಿತರಣೆ ಸ್ಥಗಿತಗೊಂಡಿದ್ದರಿಂದ ಖರೀದಿಗಾಗಿ ನಿಂತಿದ್ದ ಭಕ್ತರು ಮುಖ್ಯಪ್ರಾಂಗಣದ ಮೂಲಕ ಒಳನುಗ್ಗಿ ತಳ್ಳಾಟ ನೂಕಾಟ ಉಂಟಾಗಿ ಸಾಮಾನ್ಯ ಸಾಲು ಸಂಪೂರ್ಣ ಸ್ತಬ್ಧಗೊಂಡಿತು. ಸಾಲಿನ ಮಧ್ಯೆ ಉಸಿರುಗಟ್ಟಿದ ವಾತಾವರಣ ನಿರ್ಮಾಣಗೊಂಡಿದ್ದರಿಂದ ಹಲವರು ದರ್ಶನ ಮಾಡದೇ ಹಿಂತಿರುಗಿದರು. ಮಧ್ಯಾಹ್ನದ ಹೊತ್ತಿಗೆ ವಿಶೇಷ ಕೌಂಟರ್‌ನಲ್ಲಿ ಟಿಕೆಟ್ ನೀಡಲು ಆರಂಭಿಸುತ್ತಿದ್ದಂತೆ ಸಹಜ ಸ್ಥಿತಿಗೆ ಮರಳಿದರೂ ಭಕ್ತರು ದಂಡು ದಿನವಿಡೀ ಜೋರಾಗಿತ್ತು.
ಆಡಳಿತ ಮಂಡಳಿ ನಿರ್ಲಕ್ಷ್ಯ: ಭಾನುವಾರ ರಜಾ ದಿನವಾಗಿದ್ದರಿಂದ ನಿರೀಕ್ಷೆಗೂ ಮೀರಿದ ಭಕ್ತರು ಆಗಮಿಸುವ ಸಾಧ್ಯತೆಯಿದ್ದರಿಂದ ಆಡಳಿತ ಮಂಡಳಿ ಹೆಚ್ಚಿನ ಪೊಲೀಸ್ ಭದ್ರತೆಗೆ ಮುಂದಾಗಬೇಕಿತ್ತು. ಮುಂಜಾನೆ 4ಗಂಟೆಗೆ ಭಕ್ತರು ಜಮಾವಣೆಗೊಂಡಿದ್ದರೂ ಮುಡುಕುತೊರೆ ಸೇರಿದಂತೆ ನಾನಾ ಕಡೆ ನಡೆಯುತ್ತಿದ್ದ ಜಾತ್ರಾಗಳಿಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಿದ್ದರಿಂದ ದೇವಾಲಯಕ್ಕೆ ಪೊಲೀಸ್ ಕೊರತೆ ಎದುರಾಗಿತ್ತು. ದೇವಾಲಯದಲ್ಲಿರುವ 12ಭದ್ರತಾ ಸಿಬ್ಬಂದಿಯಿಂದ ಭಕ್ತರನ್ನು ನಿಯಂತ್ರಿಸುವುದು ಸವಾಲಾಗಿ ಪರಿಣಮಿಸಿತು. ಪರಿಸ್ಥಿತಿ ಕೈಮೀರುವುದನ್ನು ಅರಿತ ಆಡಳಿತ ಮಂಡಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತ ಪೊಲೀಸರನ್ನು ಕರೆಸಿಕೊಂಡು ನಿಯಂತ್ರಿಸಲು ಮುಂದಾದರು. ಸತತ ನಾಲ್ಕು ತಾಸಿನ ಬಳಿಕ ಸಹಜ ಸ್ಥಿತಿಗೆ ಮರಳಿತು.
ಲಕ್ಷಾಂತರ ರೂ.ನಷ್ಟ: ಇನ್ನು 100 ರೂ.ಹಾಗೂ 30 ರೂ.ನ ವಿಶೇಷ ದರ್ಶನದ ಕೌಂಟರ್ ತೆರೆಯದೇ ಇರುವುದರಿಂದ ದೇವಾಲಯಕ್ಕೆ 10 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಭಕ್ತರು ಜಮಾವಣೆಗೊಳ್ಳುವ ಮುನ್ನ ಸಿಬ್ಬಂದಿ ಕೌಂಟರ್ ತೆರೆಯದೇ ನಿರ್ಲಕ್ಷ್ಯ ತಳೆದಿರುವುದರಿಂದ ಆದಾಯಕ್ಕೆ ಕತ್ತರಿ ಬಿದ್ದಿದೆ ಎನ್ನಲಾಗಿದೆ. ಭಕ್ತರ ಸಂಖ್ಯೆಯಲ್ಲಿ ಹೆಚ್ಚಾದ್ದರಿಂದ ಮಧ್ಯಾಹ್ನದ ವೇಳೆಗಾಗಲೇ ಲಕ್ಷಾಂತರ ರೂ.ಸಂಗ್ರಹವಾಗುತ್ತಿತ್ತು. ಇನ್ನು ಕೌಂಟರ್ ತೆರೆಯದೇ ಇರುವುದರಿಂದ ವಿಶೇಷ ದರ್ಶನಕ್ಕಾಗಿ ಟಿಕೆಟ್ ಖರೀದಿಸಿವರಿಗೆ ಪ್ರಸಾದ ನೀಡಲು ತಯಾರಿಸಿದ್ದ 35 ಸಾವಿರಕ್ಕೂ ಹೆಚ್ಚು ಲಾಡುಗಳು ಕೂಡ ಹಾಗೇ ಉಳಿದಿವೆ. ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಭಕ್ತರ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಸದಸ್ಯರೊಬ್ಬರು ಆರೋಪಿಸಿದ್ದಾರೆ.
ರಸ್ತೆಯಲ್ಲೇ ಉರುಳು ಸೇವೆ: ವಾಹನಗಳನ್ನು ದೇವಾಲಯದ ಸುತ್ತ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿದ್ದರಿಂದ ಉರುಳು ಸೇವೆ ಮಾಡುವ ಭಕ್ತರಿಗೂ ಬಿಸಿ ತಟ್ಟಿತು. ಉರುಳು ಸೇವೆ ಮಾಡುವ ಜಾಗದಲ್ಲಿ ಭಕ್ತರು ಹೆಚ್ಚಾಗಿದ್ದರಿಂದ ವಾಹನಗಳ ಸಂಚಾರದ ನಡುವೆಯೂ ಜೀವಭಯದಲ್ಲಿ ಭಕ್ತರು ರಸ್ತೆಯಲ್ಲೇ ಉರುಳು ಸೇವೆ ಮಾಡಿದರು. ವಾಹನಗಳ ಪಾರ್ಕಿಂಗ್‌ಗೆ ಸೀಮಿತ ಜಾಗ ನಿಗದಿ ಮಾಡಿದ್ದರೂ ಟೆಂಡರ್‌ದಾರರು ವಾಹನಗಳಿಗೆ ಸೂಕ್ತ ಮಾಹಿತಿ ನೀಡಿದೇ ಎಲ್ಲೆಂದರಲ್ಲಿ ನಿಲ್ಲಿಸಿ ಹಣ ಪಡೆಯುತ್ತಾರೆ ಎಂಬುದು ಭಕ್ತರ ಆರೋಪವಾಗಿದೆ.
ಪುಣ್ಯಸ್ನಾನಕ್ಕೆ ನೀರಿನ ಅಭಾವ: ದರ್ಶನ, ಉರುಳು ಸೇವೆ ಅವಾಂತರದ ಮಧ್ಯೆ ಪುಣ್ಯಸ್ನಾನಕ್ಕೂ ಭಕ್ತರು ಪರದಾಡುವಂತಾಯಿತು. ಕಪಿಲಾ ನದಿಯಲ್ಲಿ ನೀರಿನ ಅಭಾವದಿಂದಾಗಿ ನಿಂತ ನೀರಲ್ಲೇ ವಿಧಿಯಿಲ್ಲದೇ ಪುಣ್ಯಸ್ನಾನ ಮಾಡಲು ಭಕ್ತರು ಮುಗಿಬಿದ್ದರು.