ಸದೇಶ್ ಕಾರ್ಮಾಡ್ ಮೈಸೂರು
ದಕ್ಷಿಣಕಾಶಿ ನಂಜನಗೂಡು ವಿಧಾನಸಭಾ ಕ್ಷೇತ್ರ ಈ ಬಾರಿ ಅಭಿವೃದ್ಧಿ ಹಾಗೂ ಅನುಕಂಪದ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಲಿ ದ್ದು, ಯಾರ ಪರ ಮತದಾರರು ಒಲವು ತೋರುತ್ತಾರೆ ಎಂಬ ಕುತೂಹಲ ಪ್ರಾರಂಭವಾಗಿದೆ.
ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರ ಅಕಾಲಿಕ ನಿಧನದಿಂ ದಾಗಿ ಅವರ ಪುತ್ರ ದರ್ಶನ್ ಧ್ರುವನಾರಾಯಣ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಬಿಜೆಪಿಯಿಂದ ಶಾಸಕ ಬಿ.ಹರ್ಷವರ್ಧನ್ ಎರಡನೇ ಬಾರಿ ಕಣಕ್ಕಿಳಿದಿದ್ದಾರೆ.
ಹರ್ಷವರ್ಧನ್ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಅನುಕಂಪ ಆಧಾರದ ಮೇಲೆ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿ ಇದೆ. ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಅವರ ತಂದೆ ಧ್ರುವನಾರಾಯಣ ಹಾಗೂ ತಾಯಿ ವೀಣಾ ಕೆಲವೇ ದಿನಗಳ ಅಂತರದಲ್ಲಿ ನಿಧನರಾದರು. ಈ ಅನುಕಂ ಪದ ಜತೆಗೆ ಕಾಂಗ್ರೆಸ್ ಸರ್ಕಾರದ ಸಾಧನೆ, ಆರ್. ಧ್ರುವನಾರಾಯಣ ಚಾಮರಾಜ ನಗರ ಸಂಸದರಾಗಿದ್ದ ಸಂದರ್ಭ ನಂಜನಗೂಡು ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಚುನಾವಣೆ ಎದುರಿಸಲು ಸಜ್ಜಾಗುತ್ತಿದೆ.
ಈ ಬಾರಿ ನಂಜನಗೂಡಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ. ಜೆಡಿಎಸ್ ಇದುವರೆಗೆ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿ ಹುಡುಕಿಕೊಂಡಿಲ್ಲ. ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಅವರ ತಾಯಿ ವೀಣಾ ಮೃತಪಟ್ಟ ಸಂದರ್ಭ ‘ದರ್ಶನ್ ತಂದೆ, ತಾಯಿಯನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ನಂಜನಗೂಡು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೇ ಅಥವಾ ಬೇಡವೇ ಎಂಬ ಕುರಿತು ಚಿಂತನೆ ನಡೆಸಲಾಗುವುದು’ ಎಂದು ಜೆಡಿಎಸ್ ಮುಖಂಡರಾದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಜಕೀಯ ಸಂಚಲನಕ್ಕೂ ಕಾರಣವಾಗಿದೆ. ಜೆಡಿಎಸ್ ಮುಖಂಡರಾದ ಆರ್. ಮಾದೇಶ್, ಬೆಳವಾಡಿ ಶಿವಕುಮಾರ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದೋ ಅಥವಾ ಇಲ್ಲವೋ ಎಂಬ ಗೊಂದಲ ಇನ್ನೂ ಇದೆ. ಒಂದುವೇಳೆ ಜೆಡಿಎಸ್ ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಹೋದರೆ ಜೆಡಿಎಸ್ ಬೇರೆ ಕ್ಷೇತ್ರದಲ್ಲಿ ಇದರ ದುಷ್ಪರಿಣಾಮ ಎದುರಿಸುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅಂತಿಮ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವ ಸಾಧ್ಯತೆ ಇದೆ.
ಈ ಬಾರಿ ಜಿದ್ದಾಜಿದ್ದಿನ ಹೋರಾಟ
ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುತ್ತಿದ್ದು, ಉಭಯ ಪಕ್ಷಗಳಿಗೂ ಗೆಲುವು ಸುಲಭ ಸಾಧ್ಯವೇನು ಅಲ್ಲ. ಸುದೀರ್ಘ 4 ದಶಕಗಳಿಂದ ನಂಜನಗೂಡು ಕ್ಷೇತ್ರದ ನಾಡಿಮಿಡಿತ ಬಲ್ಲವರಾದ ಸಂಸದ ವಿ.ಶ್ರೀನಿವಾಸಪ್ರಸಾದ್ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್ ಅವರ ಮಾವ ಆಗಿದ್ದು, ಅಳಿಯನ ಗೆಲುವಿಗೆ ಪಣತೊಟ್ಟು ರಾಜಕೀಯ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಅದೇ ರೀತಿ ಕ್ಷೇತ್ರದ ಮೇಲೆ ಸಾಕಷ್ಟು ಹಿಡಿತ ಹೊಂದಿರುವ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಅವರು ಸೋದರ ಸಂಬಂಧಿಯೂ ಆಗಿರುವ ಧ್ರುವನಾರಾಯಣ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಈ ಬಾರಿ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಬಹುದು.
ವರುಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮಣಿಸುವ ಸಲು ವಾಗಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ವಿ. ಸೋಮಣ್ಣ ಸ್ಪರ್ಧಿಸುತ್ತಿರುವುದು ವರುಣ ಕ್ಷೇತ್ರದಲ್ಲಾದರೂ ಅವರ ಸ್ಪರ್ಧೆಯ ಕಂಪನ ನಂಜನಗೂಡಿನಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ನಂಜನಗೂಡು ಕ್ಷೇತ್ರದಲ್ಲಿ ದಲಿತ ಹಾಗೂ ಲಿಂಗಾಯತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ವಿ. ಸೋಮಣ್ಣ ಸ್ಪರ್ಧೆಯಿಂದ ಜಿಲ್ಲೆಯಲ್ಲಿ ಬಿಜೆಪಿಗೆ ಸಮರ್ಥ ನಾಯಕತ್ವ ದೊರೆತಂತೆ ಆಗಿದ್ದು, ವಿ.ಸೋಮಣ್ಣ ನಂಜನಗೂಡು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಚರಿಸಿ ಚುನಾ ವಣಾ ಪ್ರಚಾರ ಕೈಗೊಂಡರೆ ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಸೆಳೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.
ಕಳೆದ ನಾಲ್ಕು ದಶಕದ ರಾಜಕಾರಣ ಅವಲೋಕಿಸಿದರೆ ಈ ಕ್ಷೇತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ಭದ್ರಕೋಟೆಯಾಗಿತ್ತು. ಇದೀಗ ಕ್ಷೇತ್ರದ ಚಿತ್ರಣ ಬದಲಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಕಂಡು ಬರುತ್ತಿದೆ. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯಾಗಿ ಪರಿಶಿಷ್ಟ ಜಾತಿಗೆ ಮೀಸಲು ಆದ ಬಳಿಕ ಕಾಂಗ್ರೆಸ್ ಪಕ್ಷದಿಂದ ವಿ.ಶ್ರೀನಿವಾಸಪ್ರಸಾದ್ 2008, 2013ರಲ್ಲಿ ಗೆಲುವು ಸಾಧಿಸಿದ್ದರು. 2018 ರಲ್ಲಿ ಬಿಜೆಪಿಯಿಂದ ತಮ್ಮ ಅಳಿಯ ಹರ್ಷವರ್ಧನ್ ಅವರನ್ನು ವಿ.ಶ್ರೀನಿವಾಸ ಪ್ರಸಾದ್ ಗೆಲ್ಲಿಸಿಕೊಂಡಿದ್ದರು. 2008, 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕಳಲೆ ಕೇಶವಮೂರ್ತಿ ಸೋತಿದ್ದರೂ ತಮ್ಮದೇ ಆದ ಮತಬ್ಯಾಂಕ್ ಗಟ್ಟಿಮಾಡಿ ಕೊಂಡಿದ್ದರು. 2017ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಕಳಲೆ ಕೇಶವಮೂರ್ತಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ಶ್ರೀನಿವಾಸ ಪ್ರಸಾದ್ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಅನುಭವಿಸಿದರು.