ಶಿವಮೊಗ್ಗ: ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ಪ್ರತಿ ಲೀಟರ್‌ಗೆ ತಲಾ 3 ರೂ. ದುಬಾರಿಯಾಗಲಿದೆ. ಇದೇ ವೇಳೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಲಾಗುತ್ತಿದ್ದು ಪರಿಷ್ಕೃತ ದರ ಆ.1ರಿಂದಲೇ ಜಾರಿಗೊಳ್ಳಲಿದೆ ಎಂದು ಶಿಮುಲ್(ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ) ಅಧ್ಯಕ್ಷ ಎನ್.ಎಚ್.ಶ್ರೀಪಾದ ರಾವ್ ತಿಳಿಸಿದರು.
ಶಿಮುಲ್ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು ಪ್ರತಿದಿನ 6.70 ಲಕ್ಷ ಲೀಟರ್ ಹಾಲು ಶೇಖರಿಸಲಾಗುತ್ತಿದೆ. ರಾಜ್ಯ ಸರ್ಕಾರದ ನಿರ್ದೇಶನದಂತೆ ನಂದಿನಿ ಹಾಲು ಮತ್ತು ಮೊಸರಿನ ದರ ಪರಿಷ್ಕರಣೆ ಮಾಡಲಾಗಿದೆ. ಗ್ರಾಹಕರಿಂದ ಪಡೆಯುವ ಮೊತ್ತವನ್ನು ಹೈನುಗಾರಿಕೆಯನ್ನು ಉತ್ತೇಜಿಸಲು ಹಾಲು ಉತ್ಪಾದಕರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದ 14 ಹಾಲು ಒಕ್ಕೂಟಗಳು ದರ ಪರಿಷ್ಕರಣೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದವು. ಅದರಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಳಿ ಶಿಮುಲ್ ಕೂಡ ಮನವಿ ಮಾಡಿತ್ತು. ಅದರಂತೆ ಆ.1ರಿಂದ ಪ್ರತಿ ಲೀಟರ್ ಹಾಲು ಮತ್ತು ಮೊಸರಿನ ದರ ಪರಿಷ್ಕರಣೆಯಾಗಿದೆ ಎಂದರು.
ಇದುವರೆಗೆ 39 ರೂ. ಇದ್ದ ಪ್ರತಿ ಲೀ. ಟೋನ್ಡ್ ಹಾಲಿನ ದರ ಇನ್ಮುಂದೆ 42 ರೂ. ಆಗಲಿದೆ. ಅರ್ಧ ಲೀ.(510 ಮಿಲಿ ಲೀ.) ಹಾಲು 20ನಿಂದ 22 ರೂ.ಗೆ ಏರಿಕೆಯಾಗಲಿದೆ. 45 ರೂ. ಇದ್ದ ಪ್ರತಿ ಲೀ. ಶುಭಂ ಸ್ಟಾಂಡರ್ಡ್ ಹಾಲಿನ ದರ 48 ರೂ., ಅರ್ಧ ಲೀ.(510 ಮಿಲಿ ಲೀ.) ಹಾಲಿನ ದರ 23 ರೂ.ನಿಂದ 25 ರೂ.ಗೆ ಏರಿಕೆ ಕಂಡಿದೆ. 46 ರೂ. ಇದ್ದ ಹೊಮೊಜೀನೈಸ್ಡ್ ಶುಭಂ ಹಾಲಿನ ದರ ಪ್ರತಿ ಲೀ.ಗೆ 49 ರೂ., ಅರ್ಧ ಲೀ.(510 ಮಿ.ಲೀ.) ಹಾಲು 23ರಿಂದ 25 ರೂ., 200 ಮಿ.ಲೀ.ನ ಹಾಲು 11ರಿಂದ 12 ರೂ.ಗೆ ಏರಿಕೆಯಾಗಿದೆ ಎಂದು ವಿವರಿಸಿದರು.
ಇದುವರೆಗೆ ಒಕ್ಕೂಟದಿಂದ ಸಂಘಗಳಿಗೆ ಶೇ.4 ಫ್ಯಾಟ್ ಮತ್ತು ಎಸ್‌ಎನ್‌ಎಫ್ ಶೇ.8.50 ಸೇರಿ ಪ್ರತಿ ಲೀಟರ್‌ಗೆ 33.71 ರೂ. ನೀಡಲಾಗುತ್ತಿತ್ತು. ಇದೀಗ 36.83 ರೂ. ಆಗಲಿದೆ. ಸಂಘದಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀ.ಗೆ 31.85 ರೂ. ನೀಡುತ್ತಿದ್ದು ಇನ್ಮುಂದೆ 34.97 ರೂ. ನೀಡಲಾಗುವುದು ಎಂದರು.
ಮಾಜಿ ಅಧ್ಯಕ್ಷರಾದ ಡಿ.ಆನಂದ್, ವಿದ್ಯಾಧರ, ನಿರ್ದೇಶಕರಾದ ಸಿ.ವೀರಭದ್ರಬಾಬು, ಜಗದೀಶಪ್ಪ ಬಣಕಾರ್, ಟಿ.ಶಿವಶಂಕರಪ್ಪ. ಪಿ.ತಿಪ್ಪೇಸ್ವಾಮಿ, ಎಚ್.ಬಿ.ದಿನೇಶ್, ಬಿ.ಜಿ.ಬಸವರಾಜಪ್ಪ, ಕೆ.ಎ.ತಾರಾನಾಥ, ಕೆ.ಎನ್.ಸೋಮಶೇಖರಪ್ಪ, ಜೆ.ಪಿ.ಯಶವಂತರಾಜು, ಎನ್.ಎಚ್.ಭಾಗ್ಯಾ, ಎನ್.ಡಿ.ಹರೀಶ್, ಕೆ.ಪಿ.ರುದ್ರೇಗೌಡ, ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್ ಇದ್ದರು.