ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಹಂಚಲಾದ ಲಡ್ಡುವಿಗೆ ಕೆಎಂಎಫ್ ನಂದಿನಿ ಬ್ರಾಂಡ್ನ ತುಪ್ಪ ಬಳಸಲಾಗಿದೆ. ನಂದಿನಿ ತುಪ್ಪವನ್ನು ಬಳಸಿಕೊಂಡು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಲಡ್ಡು ತಯಾರು ಮಾಡುತ್ತಿರುವುದು ಪ್ರಸಿದ್ಧಿ. ಇಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಶೇಷಾದ್ರಿ ಪಟನಾದಲ್ಲಿ ಹನುಮಾನ್ ಮಂದಿರದ ಮ್ಯಾನೇಜರ್ ಆಗಿ ನೇಮಕಗೊಂಡಿದ್ದು, ಒಂದು ವರ್ಷದಿಂದಲೂ ಅಲ್ಲಿಗೆ ನಂದಿನಿ ಬ್ರಾಂಡ್ನ ತುಪ್ಪ ತರಿಸಿಕೊಂಡು ಲಡ್ಡು ಮಾಡಿಸುತ್ತಿದ್ದಾರೆ. ಕನ್ನಡಿಗನೊಬ್ಬನ ಕಾರಣದಿಂದ ನಂದಿನಿ ಬ್ರಾಂಡ್ನ ತುಪ್ಪ ತಿರುಪತಿಯಿಂದ, ಪಟನಾಕ್ಕೆ ಬಳಿಕ ಅಯೋಧ್ಯೆಗೆ ತಲುಪಲು ಸಾಧ್ಯವಾಗಿದೆ.
ರಾತ್ರಿಯಿಡೀ ಭಜನೆ, ಜಾಗರಣೆ
ಪ್ರಧಾನಿ ಸಹಿತ ಪ್ರಮುಖರು ಆಗಮಿಸಲಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ರಾತ್ರಿವೇಳೆ ಮನೆಯಿಂದ ಹೊರಬರದಂತೆ ಸೂಚಿಸಲಾಗಿತ್ತು. ಆದರೆ ಜನರ ಸಂಭ್ರಮಕ್ಕೆ ಈ ನಿಯಮ ಅಡ್ಡಿಬರಲಿಲ್ಲ. ಜನರು ಮನೆಯಲ್ಲೇ ರಾತ್ರಿಯಿಡೀ ರಾಮ ಭಜನೆ, ಕೀರ್ತನೆಗಳನ್ನು ಹಾಡಿದರು. ಇಡೀ ರಾತ್ರಿ ಅಯೋಧ್ಯೆಯಲ್ಲಿ ರಾಮ ಭಜನೆ ಪ್ರತಿಧ್ವನಿಸುತ್ತಿತ್ತು. ಬಹುತೇಕರು ನಿದ್ದೆ ಮಾಡದೇ ರಾಮನಾಮ ಪಠಿಸುವ ಮೂಲಕ ಜಾಗರಣೆ ಮಾಡಿದರು. ಸರಯೂ ನದಿಯ ತೀರದಲ್ಲಿ ದೀಪಗಳನ್ನು ಬೆಳಗಿ, ದೀಪಾವಳಿಯ ರೀತಿಯಲ್ಲಿ ಸಂಭ್ರಮ ಆಚರಿಸಲಾಯಿತು.
ಪಟನಾದಲ್ಲಿರುವ ಹನುಮಾನ್ ಮಂದಿರಕ್ಕೆ ಒಂದು ವರ್ಷದಿಂದಲೂ ಪ್ರತಿ ತಿಂಗಳು 18 ರಿಂದ 20 ಟನ್ ನಂದಿನಿ ತುಪ್ಪವನ್ನು ತರಿಸಿಕೊಳ್ಳುತ್ತಿದ್ದಾರೆ. ಅಯೋಧ್ಯೆಗೂ ಲಡ್ಡು ಮಾಡಲು ತುಪ್ಪದ 15 ಕೆಜಿ ಟಿನ್ಗಳನ್ನು (15 ಟನ್) ಲಾರಿಯಲ್ಲಿ ಕಳುಹಿಸಿಕೊಡಲಾಯಿತು. | ಸತೀಶ್ ಎಂಡಿ, ಕೆಎಂಎಫ್
1.75 ಲಕ್ಷ ಲಡ್ಡು ವಿತರಣೆ
ಶ್ರೀರಾಮ ಮಂದಿರ ಭೂಮಿ ಪೂಜೆಗೆ 1.75 ಲಕ್ಷ ಲಡ್ಡುಗಳನ್ನು ವಿತರಣೆ ಮಾಡಲಾಗಿದೆ. ಅದಕ್ಕೆ 20 ಸಾವಿರ ಕೆಜಿ ನಂದಿನಿ ತುಪ್ಪ ಬಳಸಲಾಗಿದೆ.