ಜಿನೇವಾ: ಕರೊನಾ ವೈರಸ್ನ ವಿವಿಧ ಪ್ರಭೇದಗಳಿಗೆ ‘ಸುಲಭವಾಗಿ ಉಚ್ಚರಿಸಲು ಸಾಧ್ಯವಾಗುವ’ ಹಾಗೂ ‘ಕಳಂಕಿತ’ ಹಣೆಪಟ್ಟಿ ಬಾರದಂಥ ಹೆಸರುಗಳನ್ನು ಇಡಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ನಿರ್ಧರಿಸಿದೆ. ಸಾರ್ಸ್ ಸಿಒವಿ-2ರ ‘ಆಸಕ್ತಿದಾಯಕ ಪ್ರಭೇದ’ (ವೆರಿಯಂಟ್ ಆಫ್ ಇಂಟರೆಸ್ಟ್- ವಿಒಐ) ಮತ್ತು ‘ಕಳವಳಕಾರಿ ಪ್ರಭೇದ’ (ವೆರಿಯಂಟ್ ಆಫ್ ಕನ್ಸರ್ನ್-ವಿಒಸಿ) ಎಂದು ನಾಮಕರಣ ಮಾಡಲಾಗಿದೆ. ಈ ಎರಡು ರೂಪಾಂತರಿ ವಿಭಾಗಗಳಿಗೆ ಗ್ರೀಕ್ ಅಕ್ಷರಮಾಲೆಯ ಹೆಸರಿಡಲಾಗಿದೆ. ಅನೇಕ ದೇಶಗಳು ಮಾಡಿದ ಮನವಿಯನ್ನು ಪುರಸ್ಕರಿಸಿ ಡಬ್ಲ್ಯುಎಚ್ಒ ಈ ಕ್ರಮಕ್ಕೆ ಮುಂದಾಗಿದೆ. ನಾಲ್ಕು ಪ್ರಭೇದಗಳನ್ನು ಗುರುತಿಸಲು ಗ್ರೀಕ್ ಅಕ್ಷರಮಾಲೆಯ ಅಕ್ಷರಗಳಾದ ಆಲ್ಪಾ, ಬೀಟಾ, ಗಾಮಾ, ಡೆಲ್ಟಾಗಳನ್ನು ಬಳಸಿದೆ.
ಆಕ್ಷೇಪ ಎತ್ತಿದ್ದ ಭಾರತ: ಭಾರತದಲ್ಲಿ ಮೊದಲಿಗೆ ಪತ್ತೆಯಾಗಿದ್ದ ವಿಒಸಿ ಬಿ.1.617 ಪ್ರಭೇದಕ್ಕೆ ‘ಭಾರತೀಯ ಪ್ರಭೇದ’ ಎಂದು ಮಾಧ್ಯಮಗಳಲ್ಲಿ ಉಲ್ಲೇಖ ವಾಗುತ್ತಿರುವುದಕ್ಕೆ ಭಾರತ ಸರ್ಕಾರ ಮೇ 12ರಂದು ಆಕ್ಷೇಪ ವ್ಯಕ್ತಪಡಿಸಿತ್ತು. ಡಬ್ಲ್ಯುಎಚ್ಒ ಈ ರೀತಿ ಎಲ್ಲೂ ಉಲ್ಲೇಖಿಸಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.
ನಾಮಕರಣ ಪದ್ಧತಿ ಮುಂದುವರಿಕೆ: ಸಾರ್ಸ್- ಸಿಒವಿ-2 ಅನುವಂಶೀಯತೆ (ಜೆನೆಟಿಕ್ ಲೈನೇಜ್) ಪತ್ತೆ ಮಾಡಲು ಹಾಗೂ ನಾಮಕರಣ ಮಾಡಲು ವಿಜ್ಞಾನಿಗಳು ಹಾಗೂ ವೈಜ್ಞಾನಿಕ ಸಂಶೋಧನಾ ಕ್ಷೇತ್ರ ಪ್ರಸಕ್ತ ಬಳಸುತ್ತಿರುವ ನಾಮಕರಣ ವ್ಯವಸ್ಥೆ ಈಗಿನಂತೆಯೇ ಮುಂದುವರಿಯಲಿದೆ ಎಂದು ಡಬ್ಲ್ಯುಎಚ್ಒ ಸ್ಪಷ್ಟಪಡಿಸಿದೆ. ಪ್ರಭೇದಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ನೆರವಾಗಲು ಡಬ್ಲ್ಯುಎಚ್ಒ ವೈರಸ್ ವಿಕಾಸ ಕಾರ್ಯಕಾರಿ ಗುಂಪಿನಿಂದ ವಿಜ್ಞಾನಿಗಳ ತಂಡ, ಡಬ್ಲ್ಯುಎಚ್ಒ ಕೋವಿಡ್-19 ರೆಫರೆನ್ಸ್ ಲ್ಯಾಬೊರೇಟರಿ ಜಾಲ, ಜಿಐಎಸ್ಎಐಡಿ, ನೆಕ್ಸ್ ್ಟ್ಟ್ರೇಯ್್ನ ಮತ್ತು ಪಾಂಗೊ ಸಂಸ್ಥೆಗಳ ಪ್ರತಿನಿಧಿಗಳ ತಂಡವನ್ನು ಡಬ್ಲ್ಯುಎಚ್ಒ ರಚಿಸಿದೆ. ಇವರೊಂದಿಗೆ ವಿವಿಧ ದೇಶಗಳು ಹಾಗೂ ಸಂಸ್ಥೆಗಳ ವೈರಾಣು ತಜ್ಞರು, ಸೂಕ್ಷಾ್ಮಣುಜೀವಿ ನಾಮಕರಣ ಹಾಗೂ ಸಂವಹನ ತಜ್ಞರೂ ಸಮಿತಿಗೆ ನೆರವಾ ಗಲಿದ್ದಾರೆ. ಉಚ್ಚರಿಸಲು ಸುಲಭವಾಗುವ ಮತ್ತು ಯಾರಿಗೂ ಕಳಂಕ ಹಚ್ಚದ ರೀತಿಯ ಹೆಸರುಗಳನ್ನು ಸೂಚಿಸಲು ಈ ತಂಡದ ರಚನೆಯಾಗಿತ್ತು. ಈ ಸಮಿತಿ, ಸದ್ಯಕ್ಕೆ ಗ್ರೀಕ್ ವರ್ಣಮಾಲೆಯ ಆಲ್ಪಾ, ಬೀಟಾ, ಗಾಮಾ ಅಕ್ಷರಗಳನ್ನು ವೈರಸ್ ಪ್ರಭೇದಗಳ ಲೇಬಲಿಂಗ್ಗೆ ಬಳಸುವಂತೆ ಶಿಫಾರಸು ಮಾಡಿತ್ತು. ಇದು ಸುಲಭ ಅಲ್ಲದೆ, ವಿಜ್ಞಾನೇತರ-ಸಮುದಾಯದ ಜನರಿಗೆ ರ್ಚಚಿಸಲೂ ಅನುಕೂಲಕರವಾಗಲಿದೆ ಎಂಬುದು ಡಬ್ಲ್ಯುಎಚ್ಒ ವಿವರಣೆಯಾಗಿದೆ.
- ಬ್ರಿಟನ್ ಪ್ರಭೇದ ಆಲ್ಪಾ: ಮೊದಲಿಗೆ ಬ್ರಿಟನ್ನಲ್ಲಿ ಪತ್ತೆಯಾದ ವಿಒಸಿ ಬಿ.1.1.7 ಇದನ್ನು ಆಲ್ಪಾ ಎಂದು ಕರೆಯಲಾಗುತ್ತದೆ. 2020 ಸೆಪ್ಟೆಂಬರ್ನಲ್ಲಿ ಈ ಪ್ರಭೇದ ಕಾಣಿಸಿತ್ತು.
- ದಕ್ಷಿಣ ಆಫ್ರಿಕಾ ಪ್ರಭೇದ ಬೀಟಾ: ದಕ್ಷಿಣ ಆಫ್ರಿಕಾದಲ್ಲಿ ಮೊದಲಿಗೆ ಕಂಡುಬಂದ ವಿಒಸಿ ಬಿ.1.351ಗೆ ಬೀಟಾ ಎಂದು ಹೆಸರಿಡಲಾಗಿದೆ. 2020ರ ಮೇ ತಿಂಗಳಲ್ಲಿ ಈ ರೂಪಾಂತರಿ ಪತ್ತೆಯಾಗಿತ್ತು.
- ಬ್ರೆಜಿಲ್ ಪ್ರಭೇದ ಗಾಮಾ: 2020ರ ನವೆಂಬರ್ನಲ್ಲಿ ಬ್ರೆಜಿಲ್ನಲ್ಲಿ ಕಂಡು ಬಂದ ವಿಒಸಿ ಪಿ.1 ರೂಪಾಂತರಿಯನ್ನು ಮುಂದೆ ಗಾಮಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
- ಭಾರತದ ಡೆಲ್ಟಾ ಪ್ರಭೇದ: 2020ರ ಅಕ್ಟೋಬರ್ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಕಂಡು ಬಂದ ರೂಪಾಂತರಿ ಬಿ.1.617.2 ಅನ್ನು ಡೆಲ್ಟಾ ಎಂದು ಕರೆಯಲಾಗುತ್ತದೆ.