ಮಧ್ಯಪ್ರದೇಶ: ನಮೀಬಿಯಾದಿಂದ ಭಾರತಕ್ಕೆ ಬಂದಿದ್ದ ಚೀತಾವೊಂದು ಇದೀಗ 4 ಮರಿಗಳಿಗೆ ಜನ್ಮ ನೀಡಿದೆ. ಈ ಬಗ್ಗೆ ಕೇಂದ್ರ ಸಚಿವ ಭೂಪೇಂದರ್ ಸಿಂಗ್ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ ವರ್ಷ ಸೆ.17ರಂದು ನಮೀಬಿಯಾ ದೇಶದಿಂದ 8 ಚೀತಾಗಳನ್ನು ಭಾರತಕ್ಕೆ ಕರೆತರಲಾಗಿತ್ತು. 8 ರಲ್ಲಿ 5 ಹೆಣ್ಣು ಮತ್ತು 3 ಗಂಡು ಚೀತಾಗಳು. ನಮೀಬಿಯಾ ರಾಜಧಾನಿ ವಿಂಡ್ಹೋಕ್ನಿಂದ ವಿಶೇಷವಾಗಿ ಡಿಸೈನ್ ಮಾಡಲಾದ ಹುಲಿ ಮುಖದ ಬಿ-747 ಜಂಬೋ ಜೆಟ್ನಿಂದ ಚೀತಾಗಳನ್ನು ಕರೆತರಲಾಗಿತ್ತು. ಅವುಗಳನ್ನು ಪ್ರಧಾನಿ ಮೋದಿ ಅವರು ತಮ್ಮ ಜನ್ಮದಿನದಂದೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾವನಕ್ಕೆ ಬಿಟ್ಟಿದ್ದರು.
70 ವರ್ಷಗಳ ಹಿಂದೆಯೇ ಅಳಿದು ಹೋಗಿದ್ದ ಚೀತಾ ಸಂತತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಭಾರತಕ್ಕೆ ಚೀತಾಗಳನ್ನು ಕರೆತರಲಾಗಿದೆ. ಇದಕ್ಕಾಗಿ ಪ್ರಾಜೆಕ್ಟ್ ಚೀತಾ ಹೆಸರಿನಲ್ಲಿ ಭಾರತವು ನಮೀಬಿಯಾದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ನಮೀಬಿಯಾದಿಂದ ತರಲಾಗಿದ್ದ ಸಶಾ(3) ಹೆಸರಿನ ಹೆಣ್ಣು ಚೀತಾ ಮೂತ್ರಪಿಂಡ ಸೋಂಕಿನಿಂದ ಕಳೆದ ಸೋಮವಾರ ಮೃತಪಟ್ಟಿತ್ತು. ಭಾರತಕ್ಕೆ ತರುವ ಮೊದಲೇ ಕಿಡ್ನಿ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ ಚೀತಾವನ್ನ ಕ್ವಾರಂಟೈನ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸದ್ಯ ಉಳಿದ ಏಳು ಚೀತಾಗಳು ಆರೋಗ್ಯವಾಗಿದ್ದು, ಕುನೋ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶದಲ್ಲಿವೆ. ಅವುಗಳು ಸಕ್ರೀಯವಾಗಿ ಬೇಟೆಯಾಡುತ್ತಿವೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆಎಸ್ ಚೌಹಾಣ್ ತಿಳಿಸಿದ್ದಾರೆ.