ಬೆಂಗಳೂರು:(Contractors set November deadline for the government) ನವೆಂಬರ್‌ದೊಳಗೆ ಕಾಮಗಾರಿ ನಿರ್ವಹಿಸಿರುವ ಬಾಕಿ ಬಿಲ್ಗಳಿಗೆ ಹಣ ಬಿಡುಗಡೆ ಮಾಡದಿದ್ದರೆ ಡಿಸೆಂಬರ್‌ನಲ್ಲಿ ಲಂಚ ಪಡೆದಿರುವ ಶಾಸಕರ ಹೆಸರು ಬಹಿರಂಗಪಡಿಸಲಾಗುವುದು. ಲಂಚ ತಿಂದವರ ಹೆಸರು ಘೋಷಿಸಿ ದೇವರ ಮುಂದೆ ಪ್ರಮಾಣ ಮಾಡುವಂತೆ ಆಹ್ವಾನಿಸುವುದಾಗಿ ರಾಜ್ಯ ಗುತ್ತಿಗೆದಾರರ ಸಂಘ, ಭ್ರಷ್ಟಾಚಾರಿಗಳಿಗೆ ಸವಾಲು ಎಸೆದಿದೆ.
ಸರ್ಕಾರ ವಿವಿಧ ಇಲಾಖೆಗಳಿಂದ ಅಂದಾಜು 37,980 ಸಾವಿರ ಕೋಟಿ ರೂ. ಬಾಕಿ ಬಿಲ್‌ಗಳಿವೆ. ಕೆಂಪಣ್ಣ ಹೆಸರು ಬಳಸಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಮಗೆ ಸಹಾಯ ಮಾಡಲಿಲ್ಲ. ಅಂದಿನ ಡಿಸಿಎಂ ಆಗಿದ್ದ ಡಿ.ಕೆ.ಶಿವಕುಮಾರ್, ಸ್ವಾತಂತ್ಯ ಉದ್ಯಾನದಲ್ಲಿ ನಡೆಸಿದ್ದ ಪ್ರತಿಭಟನಾ ಸ್ಥಳಕ್ಕೆ ಬಂದು ಒಂದೇ ಕಂತಿನಲ್ಲಿ ಹಣ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದರು. ಸಿಎಂ ಆದ ಬಳಿಕ ಡಿ.ಕೆ.ಶಿವಕುಮಾರ್, ಕಳೆದ ಜೂ.30ರಂದು ನಡೆದ ಸಭೆಯಲ್ಲಿ ಬಾಕಿ ಬಿಲ್ಗಳಿಗೆ ಹಣ ಪಾವತಿಸುವುದಾಗಿ ಭರವಸೆ ಕೊಟ್ಟಿದ್ದರೂ ಇದುವರೆಗೆ ಈಡೇರಿಲ್ಲ. ಹಾಗಾಗಿ, ನಮ್ಮ ಸಮಸ್ಯೆಗಳು ಬಗೆಹರಿಯದಿದ್ದರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಹೇಳಿದರು.
ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲಿ ಕಮಿಷನ್ ದಂಧೆ ಹೆಚ್ಚಳವಾಗಿದೆ. ಕಮಿಷನ್ ಕೊಟ್ಟವರಿಗೆ ಮಾತ್ರ ಬಿಲ್ ಪಾವತಿಸಲಾಗುತ್ತಿದೆ.ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶೇ.75 ಶಾಸಕರು, ಟೆಂಡರ್‌ಗಳಲ್ಲಿ ಮೂಗು ತೂರಿಸುತ್ತಿದ್ದಾರೆ. ಅನುದಾನ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಟೆಂಡರ್ ನಡೆಸಬಾರದು. ಕೂಡಲೇ ಕಾಂಟ್ರಾಕ್ಟ್ ಮ್ಯಾನೇಜ್‌ಮೆಂಟ್ (ಒಪ್ಪಂದ ನಿರ್ವಹಣೆ) ರದ್ದುಗೊಳಿಸಬೇಕು. 4 ವರ್ಷದಿಂದ ಬಾಕಿ ಬಿಲ್ಗಳಿಗೆ ಹಣ ಬಿಡುಗಡೆ ಆಗದ ಹಿನ್ನೆಲೆಯಲ್ಲಿ 1.5 ಲಕ್ಷ ಗುತ್ತಿಗೆದಾರರು ಪರದಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಣ ಬಿಡುಗಡೆಯಾಗದಿದ್ದರೆ ವಿಷ ಕುಡಿಯುವ ಪರಿಸ್ಥಿತಿ ಇದೆ ಎಂದು ಆರ್. ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಪಧಾದಿಕಾರಿಗಳಾದ ಬಿ.ಸಿ. ದಿನೇಶ್, ಹನುಮಂತಯ್ಯ, ಕೃಷ್ಣೇಗೌಡ, ಗುರುಸಿದ್ಧಪ್ಪ, ಜಿ.ಎಂ. ರವೀಂದ್ರ, ಜಗದೀಶ್, ಸಿ.ಡಿ.ಕೃಷ್ಣ, ಯತಿರಾಜು, ಡಿ.ಎಂ. ನಾಗರಾಜು, ಕೃಷ್ಣರೆಡ್ಡಿ ಸೇರಿ ಮತ್ತಿತರರಿದ್ದರು.
ಕಮಿಷನ್ ಕೊಟ್ಟರಷ್ಟೇ ಭೂಮಿ ಪೂಜೆಗೆ ಬರ್ತಾರೆ ಶಾಸಕರು:
ಈಗಿನ ಸರ್ಕಾರದ ಮಂತ್ರಿಗಳಿಗೆ, ಶಾಸಕರಿಗೆ ಕಮಿಷನ್ ನೀಡಬೇಕಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವ ಶಾಸಕರು, ತಮಗೆ ಬೇಕಾದವರಿಗೆ ಟೆಂಡರ್ ಕೊಡಿಸುತ್ತಿದ್ದಾರೆ. ನಿಯಮ ಉಲ್ಲಂಘಿಸಿ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿವೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಸಕರು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕಮಿಷನ್ ಕೊಟ್ಟರಷ್ಟೇ ಎಂಎಲ್‌ಎಗಳು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಬರುತ್ತಾರೆ. ಇಲಾಖೆಯಲ್ಲಿ ಜ್ಯೇಷ್ಠತೆ ಆಧಾರದಲ್ಲಿ ಹಣ ಬಿಡುಗಡೆ ಮಾಡಬೇಕು. 2017 ಮತ್ತು 2018ರಲ್ಲಿ ವ್ಯಾಟ್‌ನಿಂದ ಜಿಎಸ್‌ಟಿ ವ್ಯತ್ಯಾಸದ ಮೊತ್ತ ಶೇ.8 ತುರ್ತಾಗಿ ನೀಡಲು ಸಿಎಂ ಅವರು ಆರ್ಥಿಕ ಇಲಾಖೆಗೆ ಶಿಫಾರಸ್ಸು ಮಾಡಬೇಕು. ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಟೆಂಡರ್ ಸಿಗುತ್ತಿಲ್ಲ ಎಂದು ಆರ್. ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಲೋಕೋಪಯೋಗಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊರತುಪಡಿಸಿ ಬೇರೆ ಇಲಾಖೆಗಳು ಟೆಂಡರ್ ಮತ್ತು ಹಣ ಬಿಡುಗಡೆಯ ವಿಚಾರದಲ್ಲಿ ಪಾರ್ದರ್ಶಕವಾಗಿಲ್ಲ. ಸಿಎಂ ಡಿಕೆಶಿ ಅವರೇ 40 ಸಾವಿರ ಕೋಟಿ ರೂ.ಬಾಕಿ ಇದೆ ಎಂದು ಹೇಳುತ್ತಾರೆ. ಅವರಿಗೆ ಪತ್ರ ಬರೆದು ನಿರಂತರವಾಗಿ ಸಮಸ್ಯೆ ಹೇಳಿಕೊಂಡರೂ ಪ್ರಯೋಜನವಾಗಿಲ್ಲ. ಹಿಂದಿನ ಸಿಎಂ ಅವರು ಸಭೆ ಕರೆದಿರಲಿಲ್ಲ. ಈಗಿನ ಸಿಎಂ ಸಹ ಗುತ್ತಿಗೆದಾರರ ಜತೆ ಸಭೆ ಕರೆಯಲು ಹಿಂದೇಟು ಹಾಕುತ್ತಿದ್ದಾರೆ.
- ಜಿ.ಎಂ.ನಂದಕುಮಾರ್, ಪ್ರಧಾನ ಕಾರ್ಯದರ್ಶಿ, ರಾಜ್ಯ ಗುತ್ತಿಗೆದಾರರ ಸಂಘ.
ಇಲಾಖೆವಾರು ಬಾಕಿ ಬಿಲ್‌ಗಳ ವಿವರ
ಇಲಾಖೆ ಬಿಲ್‌ಗಳ ಬಾಕಿ( ಕೋಟಿ ರೂ.ಗಳಲ್ಲಿ)
ಜಲಸಂಪನ್ಮೂಲ ಇಲಾಖೆ 14,000
ಲೋಕೋಪಯೋಗಿ ಇಲಾಖೆ 8,370
ಸಣ್ಣ ನೀರಾವರಿ 3,600
ಆರ್‌ಡಿಪಿಆರ್ 3,000
ವಸತಿ 2,600
ಜಿಬಿಎ 2,600
ಕಾರ್ಮಿಕ 2,000
ನಗರಾಭಿವೃದ್ಧಿ 1,800
ಒಟ್ಟು ಮೊತ್ತ 37,970