ನ್ಯೂಸ್

ಹೊಸ ಬಸ್ ನಿಲ್ದಾಣ ವೃತ್ತಕ್ಕೆ ಅಂಬೇಡ್ಕರ್ ಹೆಸರಿಡಲಿ

ಮುಂಡರಗಿ: ಪಟ್ಟಣದ ಹೊಸ ಬಸ್ ನಿಲ್ದಾಣದ ಸರ್ಕಲ್ ಅನ್ನು ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಎಂದು ಅಧಿಕೃತವಾಗಿ ನಾಮಕಾರಣ ಮಾಡಿ ಠರಾವು ಪಾಸು ಮಾಡಬೇಕು ಎಂದು ಒತ್ತಾಯಿಸಿ ನಮ್ಮ ಕರವೇ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಗುರುವಾರ ಪುರಸಭೆ ಮುಖ್ಯಾಧಿಕಾರಿ ಹಾಗೂ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಹೊಸ ಬಸ್ ನಿಲ್ದಾಣ ಸರ್ಕಲ್​ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಎಂದು ನ. 26ರಂದು ತಾಲೂಕಿನ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಸಂವಿಧಾನ ಪೀಠಿಕೆ ಓದುವ ಮೂಲಕ ಸಾರ್ವಜನಿಕವಾಗಿ ನಾಮಕರಣ ಮಾಡಲಾಯಿತು. ಸಾಮಾನ್ಯ ಸಭೆಯಲ್ಲಿ ರ್ಚಚಿಸಿ ಸರ್ಕಲ್ ಅನ್ನು ಡಾ.ಬಿ.ಆರ್. ಅಂಬೇಡ್ಕರ್ ಸರ್ಕಲ್ ಎಂದು ನಾಮಕರಣ ಮಾಡುವ ಬಗ್ಗೆ ಪುರಸಭೆ ಕಾರ್ಯಾಲಯದಿಂದ ಅಧಿಕೃತವಾಗಿ ಠರಾವು ಪಾಸು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಮನವಿ ಸ್ವೀಕರಿಸಿದರು. ನಮ್ಮ ಕರವೇ ವೇದಿಕೆ ಜಿಲ್ಲಾಧ್ಯಕ್ಷ ಚಂದ್ರಶೇಖರ ಪೂಜಾರ, ಡಿಎಸ್​ಎಸ್ ತಾಲೂಕು ಸಂಚಾಲಕ ಸೋಮಣ್ಣ ಹೈತಾಪುರ, ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ, ಮಂಜುನಾಥ ಕಟ್ಟಿಮನಿ, ರಾಜೇಸಾಬ್ ಕೆಂಪಸಾಬಣ್ಣವರ, ಅಡಿವೆಪ್ಪ ಚಲವಾದಿ, ರಹಿಮಾನಸಾಬ್ ಒಂಟಿ, ಗರೀಮ್ಮಾಜ್ ವಡ್ಡಟ್ಟಿ, ಇರ್ಫಾನ್ ಬೀಪಾರಿ, ಸುರೇಶ ಸವದತ್ತಿ, ದಾದುಸಾಬ್ ಗರಡಿಮನಿ, ಇತರರಿದ್ದರು.