ನ್ಯೂಸ್

ಹೆಸರು ಬದಲಾವಣೆ ರಾಮನಗರದಲ್ಲಿ 'ರಾಮ'ನಿದ್ದಾನೆ ಎಂಬ ದ್ವೇಷವೂ, ರಿಯಲ್ ಎಸ್ಟೇಟ್ ದುರಾಸೆಯೋ? ಅಶೋಕ್ ಹೀಗೆ ಹೇಳಿದ್ದು ಯಾರಿಗೆ?

ಬೆಂಗಳೂರು: ರಾಮನಗರದಲ್ಲಿ 'ರಾಮ'ನಿದ್ದಾನೆ ಎಂಬ ದ್ವೇಷವೂ ಅಥವಾ ರಿಯಲ್ ಎಸ್ಟೇಟ್ ಕುಬೇರರಾಗುವ ದುರಾಸೆಯೋ?' ಇದು ರಾಮನಗರ ಜಿಲ್ಲೆಯನ್ನು ದಕ್ಷಿಣ ಬೆಂಗಳೂರು ಎಂದು ಹೆಸರು ಬದಲಾವಣೆ ಮಾಡಲು ಹೊರಟಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಈ ವಿಚಾರವಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬ್ರಾಂಡ್ ಬೆಂಗಳೂರು ಬಳಿಕ ರಾಮನಗರದ ಜನರ ಮೂಗಿಗೆ ತುಪ್ಪ ಸವರುತ್ತಿದ್ದಾರಾ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಮತ್ತು ಮುಡಾ ಹಗರಣದ ಬಳಿಕ ಮತ್ತೊಂದು ಭೂಕಬಳಿಕೆ ಮಾಡಲು ಹೊರಟಿದ್ದೀರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

2007ರಲ್ಲಿ ರಾಮನಗರವನ್ನ ಪ್ರತ್ಯೇಕ ಜಿಲ್ಲೆ ಮಾಡಿದ್ದು ಅಂದಿನ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ. ತಮ್ಮ ತಮ್ಮನನ್ನ ಸೋಲಿಸಿದ ಬಿಜೆಪಿ - ಜೆಡಿಎಸ್ ಮೈತ್ರಿ ವಿರುದ್ಧ ದ್ವೇಷ ಸಾಧಿಸಲು ಹೆಸರು ಬದಲಾವಣೆ ಮಾಡುತ್ತಿದ್ದೀರಾ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆದೇಶವೇ?: ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ, ರಾಮನಗರದಲ್ಲಿ ರಾಮನ ಹೆಸರು ಇರಬಾರದೆಂದು ತಮ್ಮ ನಾಯಕ, ಸಂಸದ ರಾಹುಲ್ ಗಾಂಧಿ ಅವರು ಆದೇಶ ಮಾಡಿದ್ದಾರೆಯೇ? ಅಥವಾ ಮೈಸೂರಿನಲ್ಲಿ ಭೂಕಬಳಿಕೆ ಮಾಡಿದ್ದು ಸಾಲದು ಅಂತ ಈಗ ರಾಮಾನಗರದಲ್ಲೂ ರಿಯಲ್ ಎಸ್ಟೇಟ್ ದಂಧೆ ಶುರು ಮಾಡಲು ಹೊರಟಿದ್ದೀರಾ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.