ನ್ಯೂಸ್

ಸಬರಮತಿ ಆಶ್ರಮದ ಸಂದರ್ಶಕರ ಪಟ್ಟಿಯಲ್ಲಿ ಡೊನಾಲ್ಡ್​ ಟ್ರಂಪ್​ ಬರೆದಿದ್ದೇನು ಗೊತ್ತಾ? ವೈರಲ್​ ಆಯ್ತು ಫೋಟೋ...

ಅಹಮದಾಬಾದ್: ಡೊನಾಲ್ಡ್​ ಟ್ರಂಪ್​ ಅವರು ಸಬರಮತಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ (visitor's book) ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಗಾಂಧಿ ತತ್ವಗಳನ್ನು ಸಾರುವ ಸಬರಮತಿ ಆಶ್ರಮಕ್ಕೆ ಪತ್ನಿ ಮೆಲಾನಿಯಾ ಜತೆ ಭೇಟಿ ನೀಡಿದ ಡೊನಾಲ್ಡ್​ ಟ್ರಂಪ್​ ಅವರಿಗೆ ನರೇಂದ್ರ ಮೋದಿಯವರು ಹಲವು ವಿಚಾರಗಳನ್ನು ತಿಳಿಸಿದರು. ಚರಕ ಹೇಗೆ ಕಾರ್ಯ ಮಾಡುತ್ತದೆ ಎಂಬುದನ್ನೂ ವಿವರಿಸಿದರು. ಅಲ್ಲಿಯೇ ಇದ್ದ ಆಶ್ರಮದ ಸಿಬ್ಬಂದಿ ಕೂಡ ಟ್ರಂಪ್​ ಜತೆ ಮಾತನಾಡಿದರು.

ಕೊನೆಯಲ್ಲಿ ಅಲ್ಲಿಂದ ಹೊರಡುವಾಗ ಡೊನಾಲ್ಡ್​ ಟ್ರಂಪ್​ ಮತ್ತು ಮೆಲಾನಿಯಾ ಟ್ರಂಪ್​ ಅವರು ಸಂದರ್ಶಕರ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದು, ಸಹಿ ಮಾಡಿದರು.

ಈ ವೇಳೆ ಟ್ರಂಪ್​ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಆತ್ಮೀಯ ಸ್ನೇಹಿತ ಎಂದು ಉಲ್ಲೇಖಿಸಿ, ಕೃತಜ್ಞತಾ ಅಕ್ಷರಗಳನ್ನು ಅದರಲ್ಲಿ ಬರೆದಿದ್ದಾರೆ. ಆ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಇಂತಹ ಒಂದು ಅದ್ಭುತ ಭೇಟಿಯನ್ನು ಸಾಧ್ಯವಾಗಿಸಿದ ನನ್ನ ಅತ್ಯುತ್ತಮ, ನೆಚ್ಚಿನ ಸ್ನೇಹಿತ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದು ಬರೆದಿದ್ದಾರೆ. (ಏಜೆನ್ಸೀಸ್​)