ನವದೆಹಲಿ: ನಾನಕ್ಪುರ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕಲೆತು, ಸಂವಾದ ನಡೆಸಿದ ಬಳಿಕ ಅಮೆರಿಕ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ವೇದಿಕೆ ಮೇಲೆ ಮಾತನಾಡಿದರು.
ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಮಾತನಾಡಿದ ಅವರು ನಮಸ್ತೆ ಎಂದು ಭಾಷಣ ಪ್ರಾರಂಭಿಸಿದರು. ಇದು ಅತ್ಯಂತ ಸುಂದರವಾದ ಶಾಲೆ. ನೃತ್ಯಪ್ರದರ್ಶನದಂತಹ ಸಾಂಪ್ರದಾಯಿಕ ಕಲೆಗಳ ಮೂಲಕ ನನ್ನನ್ನು ಈ ಶಾಲೆಗೆ ಸ್ವಾಗತಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದರು.
ಭಾರತಕ್ಕೆ ಇದು ನನ್ನ ಮೊದಲ ಭೇಟಿ. ಇಲ್ಲಿನ ಜನರು ಆದರಣೀಯವಾಗಿ ಮತ್ತು ಆತ್ಮೀಯವಾಗಿ ನಮ್ಮನ್ನು ಬರಮಾಡಿಕೊಂಡಿದ್ದಾರೆ ಎಂದರು.
ಅಮೆರಿಕದಲ್ಲಿ ನಾನು ಬಿ ಬೆಸ್ಟ್ (BE BEST) ಎಂಬ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ನಡೆಸುತ್ತಿದ್ದೇನೆ. ಈ ಮೂಲಕ ನಿಮ್ಮಂತಹ ಮಕ್ಕಳೊಂದಿಗೆ ಮಾತನಾಡುತ್ತೇನೆ. ಅವರೊಂದಿಗೆ ಸಂವಾದ ನಡೆಸುತ್ತೇನೆ. ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಮಾದಕ ದ್ರವ್ಯ ಸೇವನೆಯ ಅಪಾಯವನ್ನು ತಿಳಿಸುವುದು, ಅಂತರ್ಜಾಲ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು ಈ ಬಿ ಬೆಸ್ಟ್ನ ಮುಖ್ಯ ಉದ್ದೇಶ. ಒಟ್ಟಾರೆ ಮಕ್ಕಳ ಯೋಗಕ್ಷೇಮವನ್ನೇ ಗುರಿಯಾಗಿಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮೆಲಾನಿಯಾ ಟ್ರಂಪ್ ಅವರಿಗೆ ಮಕ್ಕಳು ತಾವೇ ಮಾಡಿದ ಪೇಂಟಿಂಗ್ಗಳನ್ನು ಉಡುಗೊರೆಯನ್ನಾಗಿ ನೀಡಿದರು. (ಏಜೆನ್ಸೀಸ್)