ನ್ಯೂಸ್

ಬಿಜೆಪಿ ಸೋಲಿನ ಹೊಣೆ ಹೊತ್ತ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್…

ಬೆಂಗಳೂರು: ಫಲಿತಾಂಶದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದು ಬಿಜೆಪಿ ಸೋಲಿನ ಹೊಣೆ ಹೊತ್ತುಕೊಂಡಿದ್ದಾರೆ.

ಈ ಸಂದರ್ಭ ಮಾತನಾಡಿದ ನಳಿನ್ ಕುಮಾರ್ ಕಟೀಲ್, "ಕರ್ನಾಟಕ ಫಲಿತಾಂಶ ಬಂದಿದೆ. ಇಡೀ ರಾಜ್ಯದ ಜನತೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ಆಗಿರೋರಿಗೆ ಅಭಿನಂದನೆ ಸಲ್ಲಿಸ್ತೇನೆ. ಕಾಂಗ್ರೆಸ್‌ಗೂ ಅಭಿನಂದನೆ ಸಲ್ಲಿಸ್ತೇನೆ. ಜನತಾ ಆಶಿರ್ವಾದ ಸ್ವಾಗತಿಸ್ತೇನೆ. ರಾಜ್ಯದಲ್ಲಿ ಒಳ್ಳೆಯ ಕಾರ್ಯಗಳಿಗೆ ಸ್ವಾಗತ ಕೊಟ್ಟಿದ್ದೇವೆ.

ಇನ್ನು ನಾವು ವಿರೋಧಕ್ಕೆ ವಿರೋಧ ಮಾಡಿದ್ದೇವೆ. ಮತದಾರರಿಗೆ ಸರ್ಕಾರ ಆಯ್ಕೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸ್ತೇನೆ. ನಮ್ಮ ಕಾರ್ಯಕರ್ತರು ಹಗಲು, ರಾತ್ರಿ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರ ಉತ್ತಮ ಕೆಲಸ ಮಾಡಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರು ಕೆಲಸ ಮಾಡಿದ್ದಾರೆ. ಬಿಜೆಪಿ ಸೋಲಿಗೆ ರಾಜ್ಯಾಧ್ಯಕ್ಷ ಆಗಿ ನಾನು ಹೊರ್ತೀನಿ.

ಇಂದು ಬಂದಿರೋ ಫಲಿತಾಂಶ ನಾನು ಸ್ವಾಗತಿಸ್ತೇನೆ. ಇನ್ನು ಮೋದಿ ಯಾತ್ರೆ ವಿಚಾರವಾಗಿ ಕೆಲವೆಡೆ ಜನರು ಖುಷಿ ಆಗಿದ್ದಾರೆ. ತುಂಬಾ ಕಡೆ ಗೆದ್ದಿದ್ದೇವೆ. ದೊಡ್ಡ ಬಳ್ಳಾಪುರದಲ್ಲಿ ಗೆದ್ದಿದ್ದೇವೆ. ಸೋತಿರೋ ಕಡೆ ಯಾಕೆ ಸೋತಿದ್ದೇವೆ ಅಂತ ಪರಾಮರ್ಶೆ ಮಾಡ್ತೀವಿ. ಮುಂದಿನ ಲೋಕಸಭಾ ಚುನಾವಣೆಗೆ ಒಟ್ಟಾಗಿ ಕೆಲಸ ಮಾಡ್ತೀವಿ" ಎಂದಿದ್ದಾರೆ.

ಕರ್ನಾಟಕವು ಒಟ್ಟು 224 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ ನಡುವೆ ಪೈಪೋಟಿ ನಡೆದಿದೆ. ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರ ರಚನೆ ಮಾಡಲು 113 ಸ್ಥಾನಗಳ ಸ್ಪಷ್ಟ ಬಹುಮತವನ್ನು ಪಡೆಯಬೇಕಿದೆ. ಒಂದು ವೇಳೆ ಯಾರಿಗೂ ಬಹುಮತ ಬರದಿದ್ದರೆ ಮತ್ತೆ ಅತಂತ್ರ ಸರ್ಕಾರ ರಚನೆಯಾಗಲಿದೆ.

2018ರ ಫಲಿತಾಂಶ ಏನಿತ್ತು?

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತ ದೊರೆಯಲಿಲ್ಲ. ಉಳಿದಂತೆ ಕಾಂಗ್ರೆಸ್ 80 ಮತ್ತು ಜೆಡಿಎಸ್ 31 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿತ್ತು. ಈ ಸರ್ಕಾರ ಕೇವಲ ಒಂದು ವರ್ಷ ಮಾತ್ರ ಪೂರೈಸಿತು. ಬದಲಾದ ರಾಜಕೀಯ ಚಿತ್ರಣದಲ್ಲಿ ಮೈತ್ರಿ ಸರ್ಕಾರದ 11 ಶಾಸಕರು ಬಿಜೆಪಿ ಜತೆ ಕೈಜೋಡಿಸಿದ್ದರಿಂದ ಬಿಜೆಪಿ ಸರ್ಕಾರ ರಚನೆ ಮಾಡಿತ್ತು.