ನ್ಯೂಸ್

ನಿಗಮದ ಹಣ ಲೂಟಿಗೆ ನಾಗೇಂದ್ರ ಪ್ಲ್ಯಾನ್!

ಬೆಂಗಳೂರು: ಲೋಕಸಭಾ ಚುನಾವಣೆ ನಡೆಯುವ ಮೂರ‌್ನಾಲ್ಕು ತಿಂಗಳ ಮೊದಲೇ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮಾಜಿ ಸಚಿವ ಬಿ. ನಾಗೇಂದ್ರ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂ. ಲಪಟಾಯಿಸಲು ಪ್ಲ್ಯಾನ್ ಮಾಡಿದ್ದರೆಂಬ ಸಂಗತಿ ಇಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಡಿಸೆಂಬರ್ ಕೊನೆಯ ವಾರದಲ್ಲಿ ಶಾಂಗ್ರಿಲಾ ಹೋಟೆಲ್‌ನಲ್ಲಿ ರಹಸ್ಯ ಸಭೆ ನಡೆಸಿ ನಕಲಿ ಖಾತೆ ತೆರೆಯುವ ಬಗ್ಗೆ ಚರ್ಚೆಗಳು ನಡೆಸಿದ್ದರು ಎಂಬುದು ಗೊತ್ತಾಗಿದೆ. ಇದಕ್ಕೆ ಪೂರಕವಾಗಿ ಶಾಂಗ್ರಿಲಾ ಹೋಟೆಲ್‌ನ ಸಿಸಿ ಕ್ಯಾಮರಾ ದೃಶ್ಯಾವಳಿ ಲಭ್ಯವಾಗಿವೆ. ಆದ್ದರಿಂದ ಇಡೀ ಹಗರಣಕ್ಕೆ ಬಿ. ನಾಗೇಂದ್ರ ಅವರೇ ಸೂತ್ರಧಾರ ಎಂಬುದು ಸಾಬೀತಾಗಿದೆ. ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿ ಸಚಿವರಾಗಿದ್ದ ಬಿ. ನಾಗೇಂದ್ರ, ಬಳ್ಳಾರಿ ಲೋಕಸಭಾ ಚುನಾವಣೆ ಉಸ್ತುವಾರಿಯನ್ನು ವಹಿಸಬೇಕಿತ್ತು. ಆದ್ದರಿಂದ ಸರ್ಕಾರದ ಖಜಾನೆ-2ರಿಂದ 187 ಕೋಟಿ ರೂ. ಅನ್ನು ನಿಗಮದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿದ್ದರು. ಇದಾದ ಮೇಲೆ ಡಿಸೆಂಬರ್ ಕೊನೆಯ ವಾರದಲ್ಲಿ ಶಾಂಗ್ರಿಲಾ ಹೋಟೆಲ್‌ನಲ್ಲಿ ಬಿ. ನಾಗೇಂದ್ರ, ತನ್ನ ಆಪ್ತ ಸಹಾಯಕ, ಸಂಬಂಧಿಕರಾದ ನೆಕ್ಕುಂಟೆ ನಾಗರಾಜ್, ನಾಗೇಶ್ವರ ರಾವ್, ದೇವೇಂದ್ರಪ್ಪ ಮತ್ತು ಹೈದರಾಬಾದ್‌ನ ಸತ್ಯನಾರಾಯಣ ವರ್ಮಾ ಜತೆ ರಹಸ್ಯ ಸಭೆ ಆಯೋಜನೆ ಮಾಡಿದ್ದರು. ಅಲ್ಲಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂ.ಡಿ. ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್‌ರನ್ನು ಕರೆಸಿ ಪ್ರತ್ಯೇಕ ಕಡೆ ಕೂರಿಸಿದ್ದರು.

ಬಿ. ನಾಗೇಂದ್ರರನ್ನು ಹೊರತುಪಡಿಸಿ ನೆಕ್ಕುಂಟೆ ನಾಗರಾಜ್, ನಾಗೇಶ್ವರ್ ರಾವ್, ನಿಗಮದ ಎಂ.ಡಿ. ಪದ್ಮನಾಭ್ ಬಳಿಗೆ ಹೋಗಿ ಸತ್ಯನಾರಾಯಣ ವರ್ಮಾನನ್ನು ತೋರಿಸಿ ಯೂನಿಯನ್ ಬ್ಯಾಂಕ್ ಆ್ ಇಂಡಿಯಾದ ಶಾಖೆ ವ್ಯವಸ್ಥಾಪಕ ನಿರ್ದೇಶಕ ಎಂದು ಪರಿಚಯ ಮಾಡಿಸಿದ್ದರು. ನಿಗಮದ ಹೆಸರಿನಲ್ಲಿ ಹೊಸದಾಗಿ ಬ್ಯಾಂಕ್ ಖಾತೆ ತೆರೆದು ಅಲ್ಲಿಗೆ ಹಣ ವರ್ಗಾವಣೆ ಮಾಡುವಂತೆ ಪದ್ಮನಾಭ್‌ರಿಗೆ ನೆಕ್ಕುಂಟೆ ನಾಗರಾಜ್ ಸೂಚನೆ ಕೊಟ್ಟಿದ್ದ. ಅದು ಸಾಧ್ಯವಾಗುವುದಿಲ್ಲ ಎಂದು ಪದ್ಮನಾಭ್ ವಿರೋಧ ವ್ಯಕ್ತಪಡಿಸಿದಾಗ ಕೆರಳಿದ ನೆಕ್ಕುಂಟೆ ನಾಗರಾಜ್ ‘ಮಿನಿಸ್ಟರ್ ಹೇಳಿದ್ದಾರೆ. ನಿಮ್ಮದು ಏನು ಕಥೆ. ಮಿನಿಸ್ಟರ್ ಇಲ್ಲೇ ಇದ್ದಾರೆ ಹೇಳಿಸುತ್ತೇನೆ ಇರಿ’ ಎಂದು ಅವಾಜ್ ಹಾಕಿದ್ದ. ಪಕ್ಕದ ರೂಮ್‌ನಲ್ಲಿದ್ದ ಬಿ. ನಾಗೇಂದ್ರ ಅವರಿಗೆ ವಿಷಯ ತಿಳಿಸಿದಾಗ ಅಲ್ಲಿಗೆ ಹೋಗೋಣ ಬನ್ನಿ ಎಂದು ನಾಗೇಂದ್ರ ಅವರೇ ನಿಗಮದ ಅಧಿಕಾರಿಗಳು ಇದ್ದಲ್ಲಿಗೆ ಹೋಗಿದ್ದರು.

ನೆಕ್ಕುಂಟೆ ನಾಗರಾಜ್ ಹೇಳಿದಂತೆ ಎಂ.ಜಿ. ರಸ್ತೆ ಯೂನಿಯನ್ ಬ್ಯಾಂಕ್ ಆ್ ಇಂಡಿಯಾ ಶಾಖೆಯಲ್ಲಿ ಹೊಸ ಬ್ಯಾಂಕ್ ಖಾತೆ ತೆರೆದು 187 ಕೋಟಿ ರೂ. ವರ್ಗಾವಣೆ ಮಾಡಿದ್ದರು. ಬಳಿಕ ಏನು ಮಾಡಬೇಕೆಂದು ಹೇಳುತ್ತಾರೆ ಎಂದು ಪದ್ಮನಾಭ್‌ಗೆ ಬಿ. ನಾಗೇಂದ್ರ ಸೂಚನೆ ಕೊಟ್ಟಿದ್ದರು. ಸಚಿವರ ವಿಶ್ವಾಸ ಗಳಿಸುವ ಉದ್ದೇಶಕ್ಕೆ ಅವರು ಹೇಳಿದಂತೆ ಪದ್ಮನಾಭ್ ಮಾಡಿದ್ದರು ಎಂಬುದರು ಇಡಿ ವಿಚಾರಣೆಯಲ್ಲಿ ಬಹಿರಂಗವಾಗಿದೆ.

ಇದಾದ ಮೇಲೆ ನಿಗಮದ ಉಳಿತಾಯ ಖಾತೆಯಿಂದ ಹೈದರಾಬಾದ್‌ನ 9 ನಕಲಿ ಖಾತೆಗಳಿಗೆ 45.02 ಕೋಟಿ ರೂ. ವರ್ಗಾವಣೆಯಾಗಿದೆ. ನಂತರ ನಿಗಮದ ಸೆಕ್ಯೂರ್ಡ್ ಓವರ್‌ಡ್ರ್‌ಟಾ ಖಾತೆಯಿಂದ ಇನ್ನೂ 9 ನಕಲಿ ಖಾತೆಗಳಿಗೆ 50 ಕೋಟಿ ರೂ. ವರ್ಗಾವಣೆಯಾಗಿತ್ತು. 2 ಬ್ಯಾಂಕ್ ಖಾತೆಗಳಿಂದ ಹೈದರಾಬಾದ್‌ನ ಬಂಜಾರ ಹಿಲ್ಸ್‌ನ ಆರ್‌ಬಿಎಲ್ ಬ್ಯಾಂಕ್‌ನ 18 ನಕಲಿ ಖಾತೆಗಳಿಗೆ 95.02 ಕೋಟಿ ರೂ. ವರ್ಗಾವಣೆಯಾಗಿತ್ತು.