ನ್ಯೂಸ್

ನಾಲಿಗೆ ಹರಿಬಿಟ್ಟ ಸಚಿವೆ ಸುರೇಖಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನಟ ನಾಗಾರ್ಜುನ

ಹೈದರಾಬಾದ್​: ತೆಲುಗು ನಟ ನಾಗಚೈತನ್ಯ ಮತ್ತು ನಟಿ ಸಮಂತಾ ರತು ಪ್ರಭು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ (Divorce) ಪಡೆದು ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದರು. ಡಿವೋರ್ಸ್​ ನಂತರ ಯಾವುದೇ ವಿಷಯದಲ್ಲಿಯೂ ಒಬ್ಬರಿಗೊಬ್ಬರು ಬೆರಳು ಮಾಡಿ ತೋರಿಸದೆ ತಮ್ಮ ಪಾಡಿಗೆ ತಾವಿದ್ದಾರೆ. ಆದರೆ, ಮುಗಿದು ಹೋದ ಸಮಂತಾ ಮತ್ತು ನಾಗಚೈತನ್ಯ ಅಧ್ಯಾಯದ ಬಗ್ಗೆ ಮಾತನಾಡಿದ ತೆಲಂಗಾಣ ಸಚಿವೆ ಕೊಂಡ ಸುರೇಖಾ, ಮನಬಂದಂತೆ ನಾಗಾರ್ಜುನ ಕುಟುಂಬ ಕುರಿತು ನಾಲಿಗೆ ಹರಿಬಿಟ್ಟಿದ್ದರು. ಇದೀಗ ಈ ವಿಷಯ ತೀವ್ರ ಮನಸ್ಸಿಗೆ ಘಾಸಿ ಉಂಟುಮಾಡಿದ ಹಿನ್ನಲೆ ಹಿರಿಯ ನಟ ನಾಗಾರ್ಜುನ (Nagarjuna), ಸುರೇಖಾ ವಿರುದ್ಧ ಮಾನನಷ್ಟ ಮೊಕದ್ದಮೆ (Defamation Notice) ಹೂಡಿದ್ದಾರೆ.

ಸುರೇಖಾ ಮಾಡಿದ್ದ ಆರೋಪವೇನು?

ಬಾಪುಘಾಟ್‌ನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾಧ್ಯಮದವರೊಂದಿಗೆ ಮಾತನಾಡಿದ್ದ ಸುರೇಖಾ, ಟಾಲಿವುಡ್ ರಿಯಲ್ ಲೈಫ್ ಜೋಡಿ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆಯಲು ಕೆಟಿಆರ್ ಅವರೇ ಕಾರಣ ಎನ್ನಲಾಗುತ್ತಿದೆ. ನಾನು ಇದನ್ನು ಬಹಿರಂಗವಾಗಿ ಹೇಳುತ್ತಿದ್ದೇನೆ. ಕೆಟಿಆರ್ ಅವರು ಸಚಿವರಾಗಿದ್ದ ಅವಧಿಯಲ್ಲಿ ಹಲವು ಸಿನಿಮಾ ನಾಯಕಿಯರ ಜೀವನದೊಂದಿಗೆ ಆಟವಾಡಿದ್ದಾರೆ, ನಾಯಕಿಯರ ಫೋನ್ ಕದ್ದಾಲಿಕೆ ಮಾಡಿ ನಾಯಕಿಯರನ್ನು ಡ್ರಗ್ಸ್ ಚಟಕ್ಕೆ ಸಿಲುಕಿಸಿ ಅವರ ಜೀವನವನ್ನೇ ನಾಶ ಮಾಡಿದ್ದಾರೆ. ನಾಯಕಿಯರು ಬೇಗ ಮದುವೆಯಾಗದೇ ಇರಲು ಕಾರಣ ಕೆಟಿಆರ್. ಕೆಟಿಆರ್ ನಾಯಕಿಯರ ಜೀವನ ಹಾಳು ಮಾಡಿದ್ದು ಟಾಲಿವುಡ್​ನ ಹಿರಿಯರೆಲ್ಲರಿಗೂ ಗೊತ್ತು ಎಂದು ಸರಣಿ ಆರೋಪ ಮಾಡಿ ಆಕ್ರೋಶ ಹೊರಹಾಕಿದ್ದರು.

ಕೊಂಡಾ ಸುರೇಖಾ ಹೇಳಿಕೆಯಿಂದ ಅತೀವ ಬೇಸರಕ್ಕೊಳಗಾದ ನಟ ನಾಗಾರ್ಜುನ, ಸಚಿವೆಯ ಆರೋಪಗಳು ಕುಟುಂಬಕ್ಕೆ ಧಕ್ಕೆ ಉಂಟುಮಾಡಿದೆ. ಇದರಿಂದ ನಮ್ಮ ಮನಸಿಗೆ ನೋವಾಗಿದೆ ಎಂದು ಮೊದಲು ಟ್ವೀಟ್ ಮಾಡಿ ತಿಳಿಸಿದ್ದರು. ಆದ್ರೆ, ಇದೀಗ ಸುರೇಖಾ ಮಾತುಗಳಿಂದ ಸಿಡಿದೆದ್ದ ನಾಗಾರ್ಜುನ, ಸಚಿವೆ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್​ ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆಕೆಗೆ ನೋಟಿಸ್​ ಕೂಡ ರವಾನಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).