ಶಿಗ್ಗಾಂವಿ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿರುವ 8 ಆನೆಗಳ ಹಿಂಡು ತಾಲೂಕಿನ ನಾಗನೂರ ಕೆರೆಯಲ್ಲಿ ಪ್ರತ್ಯಕ್ಷವಾಗಿದ್ದು ಸುತ್ತಲಿನ ಗ್ರಾಮದಲ್ಲಿ ಆತಂಕ ಮೂಡಿಸಿದೆ.
ನಾಗನೂರ ಕೆರೆಯ ನೀರಿನಲ್ಲಿ ಆನೆಗಳ ಹಿಂಡು ಆರಾಮವಾಗಿ ಈಜಾಡಿಕೊಂಡು ನಂತರ ರಸ್ತೆಯ ಅಕ್ಕಪಕ್ಕದಲ್ಲಿ ಬೀಡು ಬಿಟ್ಟಿವೆ. ಭಾನುವಾರ ಬೆಳಗಿನ ಜಾವ ರಸ್ತೆಯಲ್ಲಿ ಹೋಗುತ್ತಿದ್ದ ನಾಗನೂರ ಗ್ರಾಮಸ್ಥರಿಗೆ ಆನೆಗಳು ಕಂಡಿದ್ದು ಕೂಡಲೇ ಅದನ್ನು ಮೊಬೈಲ್ನಲ್ಲಿ ವೀಡಿಯೊ ಮಾಡಿಕೊಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಜಾಗೃತಿ ಮೂಡಿಸಿದ್ದಾರೆ. ವಾಹನ ಸವಾರರು ಈ ರಸ್ತೆಯಲ್ಲಿ ಓಡಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಆನೆಗಳು ಕೆರೆಯ ಸುತ್ತಲಿನ ಪ್ರದೇಶಗಳಲ್ಲಿ ಉಳಿದುಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಓಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.