ಸಾಂದರ್ಭಿಕ ಚಿತ್ರ 
ನ್ಯೂಸ್

ನಾಗಲ್ಯಾಂಡ್ ಯುವಕ, ಯುವತಿ ಮೇಲೆ ಹಲ್ಲೆ

ಬೆಂಗಳೂರು: ನಗರದ ರಾಮಸ್ವಾಮಿಪಾಳ್ಯ ರಸ್ತೆಯಲ್ಲಿ ಕ್ಯಾಬ್‌ನಲ್ಲಿ ಹೋಗುತ್ತಿದ್ದ ಈಶಾನ್ಯ ಮೂಲದ ಯುವಕ, ಯುವತಿ ಮೇಲೆ ಕಿಡಿಗೇಡಿ ಹಲ್ಲೆ ನಡೆಸಿದ್ದು, ಬಿಡಿಸಲು ಬಂದ ವ್ಯಕ್ತಿ ಮೇಲೂ ಮಚ್ಚಿನಿಂದ ದಾಳಿ ನಡೆಸಿದ್ದಾನೆ.

ನಾಗಲ್ಯಾಂಡ್ ಮೂಲದ ಸಂತ್ರಸ್ತ ಯುವತಿ, ದೂರು ಕೊಟ್ಟಿದ್ದಾರೆ. ಇದರ ಮೇರೆಗೆ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

ಆಗಸ್ಟ್ 17ರ ರಾತ್ರಿ ನಾಗಲ್ಯಾಂಡ್ ಮೂಲದ ಯುವಕ, ಯುವತಿ ಊಟ ಮಾಡಿಕೊಂಡು ಮನೆಗೆ ಕ್ಯಾಬ್‌ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆದಲ್ಲಿ ಬೈಕ್‌ನಲ್ಲಿ ಬಂದ ಕಿಡಿಗೇಡಿ, ಕ್ಯಾಬ್ ಅಡ್ಡಗಟ್ಟಿ ಸುಲಿಗೆಗೆ ಯತ್ನಿಸಿದ್ದಾನೆ. ಆಗ ಹಿಂದೆ ಕುಳಿತಿದ್ದ ಯುವಕ, ಯುವತಿಗೂ ಬೆದರಿಕೆ ಒಡ್ಡಿ ಬೆಲೆಬಾಳುವ ವಸ್ತುಗಳನ್ನು ಕೇಳಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡ ಇಬ್ಬರ ಮೇಲೆ ಬೆನ್ನತ್ತಿ ಆರೋಪಿ ಹಲ್ಲೆ ನಡೆಸಿದ್ದ.

ರಸ್ತೆಬದಿ ಮನೆಯೊಂದರ ಕಾಂಪೌಂಡ್‌ಗೆ ಹೋಗಿ ಬಚ್ಚಿಟ್ಟುಕೊಂಡಿದ್ದರು. ಅಲ್ಲಿಗೂ ಬಂದು ಮಾರಕಾಸದಿಂದ ಹಲ್ಲೆ ನಡೆಸಿ ಯುವತಿ ಬಟ್ಟೆ ಇಡಿದು ಎಳೆಯುತ್ತಿದ್ದ. ಚೀರಾಟ ಕೇಳಿಸಿಕೊಂಡ ಮನೆ ಮಾಲೀಕ ಬಂದು ನೋಡಿದಾಗ ಕಿಡಿಗೇಡಿ ಹಲ್ಲೆ ನಡೆಸಿರುವುದು ಕಂಡು ಬಿಡಿಸಲು ಹೋಗಿದ್ದಾನೆ. ಆಗ ಆರೋಪಿ, ಮನೆ ಮಾಲೀಕ ಲಾರೆನ್ಸ್ ಮೇಲೂ ಹಲ್ಲೆ ನಡೆಸಿ ಪರಾರಿ ಆಗಿದ್ದಾನೆ. ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.