ತುಮಕೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಎರಡು ದಿನಗಳ ರಾಜ್ಯ ಪ್ರವಾಸ ಸಂದರ್ಭದಲ್ಲಿ ಪ್ರಮುಖ ಮಠಗಳಿಗೆ ಭೇಟಿ ನೀಡುತ್ತಿದ್ದು, ಇದರ ಹಿಂದೆ ಮತ ಮಂತ್ರ ಜಪವಿದೆ.
ಮೊದಲ ದಿನದ ಪ್ರವಾಸ ಸಂದರ್ಭದಲ್ಲಿ ಹಳೇ ಮೈಸೂರು ಭಾಗದ ಪ್ರಮುಖ ಲಿಂಗಾಯತ ಮಠವಾದ ಸಿದ್ಧಗಂಗಾ ಮಠಕ್ಕೆ ಗುರುವಾರ ನಡ್ಡಾ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ. ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದು ಕೆಲಹೊತ್ತು ನಡ್ಡಾ ಚರ್ಚೆ ನಡೆಸಿದರು.
ಗುರುವಾರ ಸಂಜೆ ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಜೆ.ಪಿ.ನಡ್ಡಾ ಭೇಟಿ ಮಾಡುವುದರ ಹಿಂದೆ ಸ್ಪಷ್ಟ ರಾಜಕೀಯ ಸಂದೇಶ ರವಾನಿಸುವ ಉದ್ದೇಶ ಅಡಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಇತ್ತೀಚಿನ ರಾಜ್ಯ ಭೇಟಿ ವೇಳೆ ಬೆಂಗಳೂರಿನ ವಿಜಯನಗರದಲ್ಲಿನ ಒಕ್ಕಲಿಗ ಸಮುದಾಯದ ಪ್ರಮುಖ ಮಠವಾದ ಆದಿಚುಂಚನಗಿರಿ ಮಠದ ಕಚೇರಿಗೆ ಭೇಟಿ ನೀಡಿ, ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದಿದ್ದರು.
ಶುಕ್ರವಾರ ಹರಿಹರದ ಶ್ರೀ ಪಂಚಮಸಾಲಿ ಮಠ, ಕನಕ ಗುರುಪೀಠ ಹಾಗೂ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಭೇಟಿ ನೀಡುತ್ತಿರುವುದು ಗಮನಾರ್ಹವೆನಿಸಿದೆ.