ನ್ಯೂಸ್

ರೋಚಕತೆ ಸೃಷ್ಟಿಸಿದ ನಾಡಕುಸ್ತಿ

ಅವಿನಾಶ್ ಜೈನಹಳ್ಳಿ

ತೀವ್ರ ರೋಚಕತೆಯಿಂದ ಕೂಡಿದ ದಸರಾ ಮಹೋತ್ಸವದ ನಾಡಕುಸ್ತಿ ಪಂದ್ಯಾವಳಿಯಲ್ಲಿ ಗೆಲುವು ಪಡೆದ ಕಳಸ್ತವಾಡಿಯ ಪೈ. ಸಿ.ಮೋಹನ್ ಮಟ್ಟಿ ಮೇಲೆ ವಿಜೃಂಭಿಸಿದರು.
ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಶನಿವಾರವೂ ನಾಡಕುಸ್ತಿಗಳು ಮೇಳೈಸಿದವು. ನಾಡಹಬ್ಬ ದಸರಾ ಮಹೋತ್ಸವದ ಮೂರನೇ ದಿನದ ನಾಡಕುಸ್ತಿಯಲ್ಲಿ ಮಟ್ಟಿ ಏರಿ ತೊಡೆತಟ್ಟಿ ಪೈ.ಸಿ.ಮೋಹನ್ ತನ್ನ ಎದುರಾಳಿ ಕ್ಯಾತಮಾರನಹಳ್ಳಿ ಪೈ.ಕೆ.ಹರ್ಷ ಅವರನ್ನು 3 ನಿಮಿಷದಲ್ಲಿ ಚಿತ್ ಮಾಡಿದರು.
ಈ ಕುಸ್ತಿ ಆರಂಭದಿಂದಲೂ ರೋಚಕತೆಯಿಂದ ಕೂಡಿತ್ತು. ಪ್ರೇಕ್ಷಕರು ಕೂಡ ಕುತೂಹಲದಿಂದ ವೀಕ್ಷಿಸಿದರು. ಪಂದ್ಯದ ಪ್ರತಿ ಕ್ಷಣದಲ್ಲೂ ಚಪ್ಪಾಳೆ, ಶಿಳ್ಳೆ ಮೂಲಕ ಇವರಿಬ್ಬರನ್ನೂ ಪ್ರೋತ್ಸಾಹಿಸಿದರು. ಆರಂಭದಿಂದಲೂ ಇಬ್ಬರೂ ಪಟ್ಟು-ಪ್ರತಿಪಟ್ಟು ಹಾಕುತ್ತ್ತಾ ಮದಗಜಗಳ ರೀತಿ ಹೋರಾಡಿದರು. 2 ನಿಮಿಷದಲ್ಲಿ ಹರ್ಷ ಮೇಲುಗೈ ಸಾಧಿಸಿದ್ದರು. ಆದರೆ 2.30 ನಿಮಿಷದಲ್ಲಿ ಸಿಡಿದೆದ್ದ ಮೋಹನ್, ಹರ್ಷನ ಮೇಲೆ ಸವಾರಿ ಮಾಡಿ ಚಿತ್ ಮಾಡಿದರು.