ವಿಜಯಪುರ: ಕಳಪೆ ಗುಣಮಟ್ಟದ ತೊಗರಿ ಬಿತ್ತನೆ ಬೀಜ ವಿತರಣೆಯಿಂದಾಗಿ ಲಕ್ಷಾಂತರ ಹೆಕ್ಟರ್ ಬೆಳೆ ಹಾನಿಯಾಗಿ ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿರುವ ರೈತರ ಸಂಕಷ್ಟ ಆಲಿಸದ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ತೊಗರಿ ಬೆಳೆಗಾರರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮೂರು ಹಂತದಲ್ಲಿ ಸಮರ ಸಾರಿರುವುದಾಗಿ ತಿಳಿಸಿದರು.
ಈಗಾಗಲೇ ಆಯಾ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಎರಡನೇ ಹಂತದಲ್ಲಿ ತಾಳಿಕೋಟೆಯಲ್ಲಿ ಡಿ. 9 ರಂದು ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಡಿ. 10 ರಂದು ಪ್ರತೀ ಗ್ರಾಮದ ತೊಗರಿ ಬೆಳೆಗಾರರಿಂದ ಲೋಕಾಯುಕ್ತಕ್ಕೆ ದೂರು ನೀಡಲು ತೀರ್ಮಾನಿಸಲಾಗಿದೆ. ನಂತರ ಇದಕ್ಕೂ ಜಗ್ಗದೇ ಹೋದರೆ ದಪ್ಪ ಚರ್ಮದ ಜಿಲ್ಲಾಧಿಕಾರಿ ಹಾಗೂ ಕೃಷಿ ಜಂಟಿ ನಿರ್ದೇಶಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲು ತೀರ್ಮಾನಿಸಿರುವುದಾಗಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿ ಜಾರಿಗೊಳಿಸಿದ ರೈತಪರ ಯೋಜನೆಗಳನ್ನು ಸ್ಥಗಿತಗೊಳಿಸುತ್ತಲೇ ಬಂದಿದೆ. ಇದೀಗ ಸಕಾಲಕ್ಕೆ ಮಳೆಯಾದ ಹಿನ್ನೆಲೆ ಉತ್ತರ ಕರ್ನಾಟಕದ ರೈತರು ಯಥೇಚ್ಛವಾಗಿ ತೊಗರಿ ಬೆಳೆದಿದ್ದಾರೆ. ಬೀದರ, ಕಲಬುರಗಿ, ರಾಯಚೂರ, ಕೊಪ್ಪಳ, ಯಾದಗಿರಿ, ವಿಜಯಪುರ ಮತ್ತು ಬಾಗಲಕೋಟೆ ಭಾಗದಲ್ಲಿ ತೊಗರಿ ಕ್ಷೇತ್ರ ಹೆಚ್ಚಾಗಿದೆ. ಕಲಬುರಗಿಯಲ್ಲಿ 6.13 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದ್ದು, ತೊಗರಿ ಕ್ಷೇತ್ರದಲ್ಲಿ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನ ವಿಜಯಪುರದ್ದಾಗಿದ್ದು, ಇಲ್ಲಿ 5.34 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದೆ. ಆದರೆ, ಇಡೀ ಉತ್ತರ ಕರ್ನಾಟಕದಲ್ಲಿ ತೊಗರಿ ಕಾಯಿಗಟ್ಟಿಲ್ಲ. ಆಳೆತ್ತರ ಬೆಳೆದು ನಿಂತರೂ ಗಿಡದಲ್ಲಿ ಕಾಯಿಯೇ ಇಲ್ಲ. ಇದಕ್ಕೆ ಸರ್ಕಾರದಿಂದ ಏಜೆನ್ಸಿ ಮೂಲಕ ವಿತರಿಸಿದ ಕಳಪೆ ಗುಣಮಟ್ಟದ ಬಿತ್ತನೆ ಬೀಜವೇ ಕಾರಣ ಎಂದರು.
ರೈತರು ತಮ್ಮದೇ ಸಂಸ್ಕೃರಿತ ಬಿತ್ತನೆ ಬೀಜ ಬಿತ್ತಿದ ಬೆಳೆ ಬಹಳ ಚೆನ್ನಾಗಿ ಬಂದಿದೆ. ಆದರೆ ಸರ್ಕಾರದಿಂದ ಏಜೆನ್ಸಿಗಳ ಮೂಲಕ ಬಿತ್ತನೆ ಮಾಡಿದ ಬೀಜ ಆಳೆತ್ತರ ಬೆಳೆದ ಶೇ.90 ರಷ್ಟು ಬೆಳೆ ಕಾಯಿಕಟ್ಟಿಲ್ಲ. ಹೀಗಾಗಿ ಈ ಬಗ್ಗೆ ತನಿಖೆ ಮಾಡಬೇಕಾಗಿದ್ದು ಇಲಾಖೆಗಳ ಕರ್ತವ್ಯ. ಸರ್ಕಾರ ಕೂಡ ಈ ಬಗ್ಗೆ ಮುತುವರ್ಜಿ ವಹಿಸದೇ ಇರುವುದು ಖೇದಕರ ಎಂದರು.
ಕಳೆದೊಂದು ತಿಂಗಳಿನಿಂದ ರೈತರು ಬೆಳೆ ಹಾನಿಗೆ ಸಂಬಂಧಿಸಿದಂತೆ ಹೋರಾಟ ನಡೆಸುತ್ತಿದ್ದರೂ ಈವರೆಗೂ ಆ ಬಗ್ಗೆ ಅಧ್ಯಯನವಾಗಿಲ್ಲ, ಸಂಶೋಧನೆ ನಡೆಸಿಲ್ಲ, ಸಮೀಕ್ಷೆ ಕೂಡ ಕೈಗೊಂಡಿಲ್ಲವೆಂದು ಅಸಮಾಧಾನ ಹೊರಹಾಕಿದ ನಡಹಳ್ಳಿ, ಜಿಲ್ಲಾಡಳಿತ ಸತ್ತು ಹೋಗಿದೆ. ರೈತರ ಸಮಸ್ಯೆಗೆ ಕ್ಯಾರೆ ಎನ್ನುವವರೇ ಇಲ್ಲ. ಉಸ್ತುವಾರಿ ಸಚಿವರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ಕೆಡಿಪಿ ಸಭೆ ಮಾಡಿ ಅಧಿಕಾರಿಗಳಿಗೆ ಸೂಚನೆ ಕೊಡುವ ಕನಿಷ್ಠ ಕೆಲಸವೂ ಜಿಲ್ಲಾ ಉಸ್ತುವಾರಿ ಮಂತ್ರಿ ಮಾಡಿಲ್ಲ. ಜಿಲ್ಲಾಧಿಕಾರಿಯಾಗಲಿ, ಕೃಷಿ ಜಂಟಿ ಅಧಿಕಾರಿಯಾಗಲಿ ಕ್ರಮ ಕೈಗೊಂಡಿಲ್ಲ. ಆಡಳಿತ ಪಕ್ಷದ ಶಾಸಕರೇ 4-5 ಸಾವಿರ ಕೋಟಿ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ ಎನ್ನುತ್ತಿದ್ದಾರೆ. ಆದರೂ ತನಿಖೆಗೆ ಆದೇಶ ಮಾಡಿಲ್ಲವೆಂದರೆ ಕಳ್ಳರನ್ನು ಭ್ರಷ್ಟರನ್ನು ಹೇಗಾದರೂ ಮಾಡಿ ರಕ್ಷಣೆ ಮಾಡೋಣ ಎಂಬ ತೀರ್ಮಾನಕ್ಕೆ ಸರ್ಕಾರ ಮತ್ತು ಆಡಳಿತಾಧಿಕಾರಿಗಳು ಬಂದಂತಿದೆ ಎಂದರು.
ಜಂಟಿ ಕೃಷಿ ನಿರ್ದೇಶಕರನ್ನು ಕೇಳಿದರೆ ತನಿಖೆಗೆ ಸರ್ಕಾರದ ಆದೇಶ ಬರಬೇಕು ಎನ್ನುತ್ತಿದ್ದಾರೆ. ಕಾಟಾಚಾರಕ್ಕೆ ರೈತರ ಹೊಲಗಳಿಗೆ ಭೇಟಿ ನೀಡಿ ಫೋಟೋ ತೆಗೆಸಿಕೊಂಡು ಹೋಗುವ ಅಧಿಕಾರಿಗಳು ತೇವಾಂಶದ ಕೊರತೆಯಿಂದ ಬೆಳೆ ಹಾನಿಯಾಗಿದೆ ಎಂಬ ವರದಿ ನೀಡುತ್ತಾರೆ. ಮುಂದುವರಿದು ಮಂಜು ಬಿದ್ದು ಬೆಳೆ ಹಾನಿಯಾಗಿದೆ ಎನ್ನುತ್ತಾರೆ. ಅಲ್ಲದೇ, ರೈತರು ಹತ್ತಿರ ಹತ್ತಿರ ಬಿತ್ತನೆ ಮಾಡಿದ್ದರಿಂದ ಬೆಳೆಗೆ ಉಸಿರಾಡಲಾಗಲ್ಲ ಎಂದು, ಬಿಸಿಲು ಬೀಳಲ್ಲ ಎಂದು ಹೀಗೆ ಇಲ್ಲ ಸಲ್ಲದ ನೆಪ ಹೇಳುತ್ತಿದ್ದಾರೆ. ಸ್ವಾಮಿ ತೊಗರಿ ಹೂ ಗಿಡದ ಕೆಳಗೆ ಬಿಡುತ್ತದೋ ಮೇಲುಗಡೆ ಬಿಡುತ್ತದೋ? ತಲೆ ತಲಾಂತರದಿಂದ ಕೃಷಿ ಮಾಡಿಕೊಂಡು ಬಂದ ರೈತರಿಗೆ ಹೇಗೆ ಬಿತ್ತನೆ ಮಾಡಬೇಕೆಂದು ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.
ಶೇ. 80 ರಷ್ಟು ಬೆಳೆ ಹಾನಿಯಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕಿ ರೂಪಾ ಹೇಳುತ್ತಾರೆ. ಆಡಳಿತ ಪಕ್ಷದ ಶಾಸಕ ಯಶವಂತರಾಯಗೌಡ ಪಾಟೀಲರೇ ಹೇಳುತ್ತಾರೆ. ಆದರೂ ಅಧ್ಯಯನ ಆಗಲ್ಲ, ತನಿಖೆ ಆಗಲ್ಲ, ಕ್ರಮವಾಗಲ್ಲ ಎಂದರೆ ವ್ಯವಸ್ಥೆ ಎಲ್ಲಿಗೆ ಬಂದಿದೆ ಎಂಬುದನ್ನು ಜನವೇ ಅರ್ಥೈಸಿಕೊಳ್ಳಬೇಕು ಎಂದರು.
ತೊಗರಿ ಬೆಳೆಗಾರರಿಗೆ ಪರಿಹಾರ ಕಲ್ಪಿಸುವುದು, ಕಳಪೆ ಬಿತ್ತನೆ ಬೀಜ ವಿತರಿಸಿದ ಏಜೆನ್ಸಿಗಳ ಮೇಲೆ ಕ್ರಮ ಕೈಗೊಳ್ಳುವುದು ಹಾಗೂ ಏಜೆನ್ಸಿಗಳ ನೇಮಕದಲ್ಲಾದ ಹಗರಣಗಳನ್ನಿಟ್ಟುಕೊಂಡು ಬಿಜೆಪಿ ರೈತ ಮೋರ್ಚಾದಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹಂತ ಹಂತವಾಗಿ ರಾಜ್ಯಾದ್ಯಂತ ಹೋರಾಟ ವಿಸ್ತರಿಸಲಾಗುವುದು ಎಂದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮತ್ತಿತರರಿದ್ದರು.