ನ್ಯೂಸ್

ಇಂದು ನಾದಬ್ರಹ್ಮ ತ್ಯಾಗರಾಜರ ಆರಾಧನೆ

Bengaluru - General - Rama Kishan K V

ಸಂಗೀತವೇ ಸರ್ವಸ್ವವಾಗಿ ತಮ್ಮ ಛಾಪು ಉಳಿಸಿರುವ ತ್ಯಾಗರಾಜರು ಸಂಗೀತ ಲೋಕದ ಮಹಾನ್ ದಿಗ್ಗಜರು. ಅವರು ಹುಟ್ಟಿದ ತಿರುವಾವೂರು ಪುಣ್ಯಕ್ಷೇತ್ರ ಮತ್ತು ಸಮಾಧಿಯ ಬಳಿ ಪ್ರತಿ ವರ್ಷ ಈ ಸಮಯದಲ್ಲಿ ಆರಾಧನೆ ನಡೆಯುತ್ತದೆ. ಅಷ್ಟೇ ಅಲ್ಲ, ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿಯೂ ಸಂಗೀತ ಕಾರ್ಯಕ್ರಮಗಳ ಮೂಲಕ ಅವರ ಆರಾಧನೆ ನಡೆಯುತ್ತದೆ.

ಕೌಂಡಿನ್ಯ

ಸಂಗೀತ ಸಾಧನೆಯಿಂದ ಶ್ರೀಸ್ವಾಮಿಯ ಸಾಕ್ಷಾತ್ಕಾರ ಮಾಡಿಕೊಂಡು, ಭಕ್ತಿಪೂರ್ವಕವಾಗಿ ನಾದಲೋಕದಲ್ಲಿ ವಿಜೃಂಭಿಸಿದ, ದೈವಾಂಶಪೂರ್ಣ ಸಾಧಕ ಶ್ರೀ ತ್ಯಾಗರಾಜರು ಅಸಂಖ್ಯಾತ ಕೃತಿಗಳನ್ನು ರಚಿಸಿದರು. ಕೀರ್ತನೆಗಳಿಗೆ ರಾಗ ಸಂಯೋಜನೆ ಮಾಡಿ ಹಾಡಿದರು. ಸಂಗೀತ ಅಂದರೆ ತ್ಯಾಗರಾಜರು ಎಂಬಷ್ಟರ ಮಟ್ಟಿಗೆ ಅವರು ಸಾಧನೆ ಮಾಡಿದ್ದಾರೆ. ನಾಡಿನ ಉದ್ದಗಲಕ್ಕೂ ಅವರ ಲಕ್ಷಾಂತರ ಅಭಿಮಾನಿಗಳು, ಆರಾಧಕರು ಇದ್ದಾರೆ. ತ್ಯಾಗರಾಜರ ಆರಾಧನೆಯ ಸಂದರ್ಭದಲ್ಲಿ ನಾಡಿನ ಮೂಲೆಮೂಲೆಯಿಂದ ಬಂದು ತ್ಯಾಗರಾಜರ ಹುಟ್ಟೂರಿನಲ್ಲಿ ಸೇರುತ್ತಾರೆ ಮಾತ್ರವಲ್ಲ, ಭಕ್ತಿ, ಶ್ರದ್ಧೆಯಿಂದ ಮೂರು ದಿನಗಳ ಕಾಲ ಹಲವಾರು ಕಡೆ ಆರಾಧನಾ ಮಹೋತ್ಸವವನ್ನು ದೈವೀಕ ಆಚರಣೆಯ ರೀತಿಯಲ್ಲಿ ನಡೆಸುತ್ತಾರೆ.

ತ್ಯಾಗರಾಜರು ದೈವೀಕ ಪುರುಷರಾಗಿರುವುದು ಎರಡು ಕಾರಣಗಳಿಂದ. ಒಂದು, ಸಂಗೀತ ಸಾಧನೆ. ಮತ್ತೊಂದು ವೈರಾಗ್ಯ ಮತ್ತು ತ್ಯಾಗದ ಗುಣ. ಶ್ರೀಮಂತಿಕೆಯ ವೈಭವ, ಕೀರ್ತಿ, ಅರಮನೆಯ ಶೇಷ್ಠ ಸ್ಥಾನಮಾನಗಳು ಇವರನ್ನು ಅರಸುತ್ತ ಬಂದರೂ ನಯವಾಗಿ ತಿರಸ್ಕರಿಸಿದರು. ಆಕರ್ಷಣೆ ಮತ್ತು ಪ್ರಲೋಭನೆಗಳಿಗೆ ಒಳಗಾಗಿ ತತ್ವ ಬಿಡಲಿಲ್ಲ. ಅವರ ಜನ್ಮಸ್ಥಳ ತಿರುವಾಂಕೂರು. ಹುಟ್ಟಿದ್ದು ಕ್ರಿಶ 1767. ತಂದೆ ರಾಮಬ್ರಹ್ಮ ಪಂಡಿತ. ತಾಯಿ ಶಾಂತಾದೇವಿ ಸುಶೀಲೆ. ತಾತ ಗಿರಿರಾಜ ಮಹಾಕವಿ. ಆ ಕಾಲದ ಕವಿಶ್ರೇಷ್ಠರಲ್ಲಿ ಒಬ್ಬರು. ಇನ್ನು ತಂದೆ-ತಾಯಿ ಮಹಾನ್ ದೈವಭಕ್ತರು ಮತ್ತು ಆದರ್ಶ ತತ್ವಗಳನ್ನು ರೂಢಿಸಿಕೊಂಡು ಅದಕ್ಕಾಗಿ ಬದುಕುತ್ತ ಸಾರ್ಥಕತೆ ಕಂಡವರು. ತ್ಯಾಗರಾಜರು ಬೆಳೆದ ವಾತಾವರಣ ಅವರ ಭವಿಷ್ಯದ ಸಾಧನೆಗೆ ಪೂರಕವಾಗಿತ್ತು. ಅವರ ಮೊದಲ ವಿದ್ಯಾಭ್ಯಾಸ ಹುಟ್ಟೂರಿನ ಶಾಲೆಯಲ್ಲಿ, ತಂದೆಯೇ ಅವರಿಗೆ ಮೊದಲ ಗುರು, ಉನ್ನತ ಶಿಕ್ಷಣವನ್ನು ತಂಜಾವೂರಿನಲ್ಲಿ ಪಡೆದರು.

ಆದರೆ ಒಲವು ಇದ್ದದ್ದು ಸಂಗೀತದ ಕಡೆಗೆ. ಬಾಲ್ಯದಿಂದಲೂ ಅದು ಅವರನ್ನು ಆವರಿಸಿಕೊಂಡಿತ್ತು. ಬೀಸುವ ಗಾಳಿಯ ಶಬ್ದ, ಹರಿಯುವ ನೀರಿನ ಮಂಜುಳ ಕಲರವ, ಪಕ್ಷಿಗಳ ಚಿಲಿಪಿಲಿ ನಾದ ಅವರನ್ನು ಮೈ ಮರೆಯುವಂತೆ ಮಾಡಿತ್ತು. ಯಾರಾದರೂ ಹಾಡುತ್ತಿದ್ದರೆ, ಅವರು ತಲ್ಲೀನರಾಗಿ ಕೇಳುತ್ತಿದ್ದರು, ಅವರ ಸಂಗೀತದ ಅಭಿರುಚಿ, ಆಸಕ್ತಿ ಕಂಡ ತಂದೆ ಮಗನ ಸಂಗೀತ ಕಲಿಕೆಗೆ ಅವಕಾಶ ಮಾಡಿಕೊಟ್ಟರು. ವೇದಾಧ್ಯಯನ ಸಂಪನ್ನರು, ಸಂಗೀತ ವಿದ್ಯಾವಿಶಾರದರೂ ಆಗಿದ್ದ ಸೊರಟು ವೆಂಕಟರಮಣಯ್ಯನವರ ಹತ್ತಿರ ಸಂಗೀತ ಕಲಿಸಲು ಏರ್ಪಾಟು ಮಾಡಿದರು. ಕಲಿಕೆಯಲ್ಲಿ ಅವರ ತೀವ್ರ ಆಸಕ್ತಿ ಕಂಡು ಗುರುಗಳೇ ಬೆರಗಾಗಿದ್ದರು. ದಿವ್ಯ ರಾಗವನ್ನು ಸಪ್ತಸ್ತರಗಳಲ್ಲಿ ಮೂಡಿಬರುವಂತೆ ಮಾಡಿ, ಮಧುರ ಆಲಾಪನೆಯಿಂದ ಸಾಧನೆ ಮಾಡಿದ್ದರು. ಕೃಷ್ಣಭಕ್ತ ವಲ್ಲಭಾಚಾರ್ಯರ ವಂಶದಲ್ಲಿ ಜನಿಸಿದ ತ್ಯಾಗರಾಜರು ರಾಮ ಭಕ್ತರಾಗಿದ್ದರು. ಶ್ರೀರಾಮನ ಮೇಲೆ ಅಸಂಖ್ಯಾತ ಗೀತೆಗಳನ್ನು ರಚಿಸಿ, ಹಾಡಿದರು. ಇಂದಿಗೂ ಇವರು ರಚಿಸಿರುವ ರಾಮನಾಮದ ಕೀರ್ತನೆಗಳು ಸಂಗೀತ ಲೋಕದಲ್ಲಿ ವಿಹರಿಸುತ್ತಿವೆ.

ರಾಮನಾಮದ ರಾಗ ಸುಧೆಯನ್ನು ತೆಲುಗಿನಲ್ಲಿ ಹಾಡಿ ರಸಾಮೃತ ಉಣಿಸಿದ್ದರು. ಅವರನ್ನು ಆಸ್ಥಾನ ವಿದ್ವಾಂಸರನ್ನಾಗಿ ಮಾಡಿಕೊಳ್ಳಬೇಕು ಎಂದು ಆ ಕಾಲದಲ್ಲಿ ರಾಜ ಮಹಾರಾಜರುಗಳು ಪ್ರಯತ್ನ ಮಾಡಿದ್ದರು. ಆದರೆ ಅವರು ರಾಮನನ್ನು ಬಿಟ್ಟು ರಾಜರನ್ನು ಶ್ಲಾಘಿಸಲು ಸಿದ್ಧರಿರಲಿಲ್ಲ. ತಂಜಾವೂರಿನ ದೊರೆ ತನ್ನ ಮೇಲೆ ಸಂಗೀತ ರಚನೆ ಮಾಡುವಂತೆ ಒತ್ತಾಯ ಮಾಡಿದ. ತ್ಯಾಗರಾಜರಿಗೆ ಭೂಮಿ, ಬಂಗಾರ ಮತ್ತು ಮಹಾ ಆಸ್ಥಾನ ಪೀಠ ಕೊಡುವುದಾಗಿ ಹೇಳಿದ್ದ. ಸರಳಜೀವಿ, ವಿರಕ್ತಮೂರ್ತಿ, ಮಹಾ ಭಕ್ತ, ಮಹಾವೈಣಿಕ, ಮಧುರ ಗಾಯಕರಾಗಿದ್ದ ತ್ಯಾಗರಾಜರು ಪಂಡಿತ ಮತ್ತು ಪಾಮರರಿಗೆ ಸ್ಪೂರ್ತಿ ನೀಡುವ ಸಂಗೀತ ರಚಿಸಿದ್ದಾರೆ. ಅವರ ರಚನೆ ಮತ್ತು ಕೀರ್ತನೆಗಳಿಗೆ ಸ್ಪೂರ್ತಿದಾಯಕರು ಭದ್ರಾಚಲ ರಾಮದಾಸ, ಅನ್ನಮಾಚಾರ್ಯ, ಪುರಂದರದಾಸರು, ಜಯದೇವ. ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದ ಅವರು ವೇದಾಂತ ತತ್ವಗಳನ್ನು ಬೋಧಿಸಿದ್ದಾರೆ. ಅಂಧಶ್ರದ್ಧೆ, ಕಂದಾಚಾರ, ಅನ್ಯಾಯ, ಅಧರ್ಮಗಳನ್ನು ಖಂಡಿಸಿದ್ದಾರೆ. ಸ್ವಾಮಿ ದೀಕ್ಷಿತರು, ಶ್ಯಾಮ ಶಾಸ್ತ್ರಿಗಳು, ಅಚ್ಯುತಾನಂದ ವರೇಣ್ಯರು, ಶ್ರೀ ವರದ ಸ್ವಾಮಿಗಳು ಮುಂತಾದವರು ತ್ಯಾಗರಾಜರ ಸಮಕಾಲೀನ ಸಾಧಕರು. ತ್ಯಾಗರಾಜರು ದಿವ್ಯ ಸಂಗೀತ ಲೋಕಕ್ಕೆ ಮಧುರಗಾಯನ ಸುಧೆಯನ್ನು ನೀಡಿದ್ದಾರೆ. ಪುರಂದರ ದಾಸರು ಆರಂಭಿಸಿದ ಕರ್ನಾಟಕ ಸಂಗೀತ ಸೌಧದ ಮುಖ್ಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಸಂಸಾರದಲ್ಲಿದ್ದರೂ ವಿರಕ್ತ ಯತಿಯ ರೀತಿಯಲ್ಲಿ ಬಾಳಿ ಬದುಕಿದ ತ್ಯಾಗರಾಜರು ಕ್ರಿ.ಶ. 1847ರಲ್ಲಿ ಶ್ರೀರಾಮನ ಚರಣಗಳಲ್ಲಿ ಐಕ್ಯರಾದರು.

ಸಂಗೀತದಿಂದ ಮೂಡಿದ ಜ್ಯೋತಿ!

ಪುದುಕೋಟೆಯನ್ನು ಆಳುತ್ತಿದ್ದ ರಾಜಾ ವಿಕ್ರಂ ಎಂಬ ಅರಸನ ಕೋರಿಕೆಯಂತೆ ದಿವ್ಯರಾಗವನ್ನು ಶ್ರೀ ತ್ಯಾಗರಾಜರು ಹಾಡಿದರು. ಅದು ಜ್ಯೋತಿ ಸ್ವರೂಪಿಣಿ ರಾಗ. ಜನರು ಈ ರಾಗದ ಆಲಾಪನೆಯಲ್ಲಿ ಮೈ ಮರೆತರು. ದಿವ್ಯರಾಗ ಎಲ್ಲಾ ಕಡೆ ಆವರಿಸಿತು, ಯಾವ ಉಪಕರಣ ಮತ್ತು ಸಲಕರಣೆ ಇಲ್ಲದೆ, ಯಾವ ಪ್ರಯತ್ನವೂ ಇಲ್ಲದೆ ಜ್ಯೋತಿ ತಾನೇ ತಾನಾಗಿ ಬೆಳಗಿತು. ಇದರಿಂದಾಗಿ ಅವರ ಕೀರ್ತಿ ನಾಡಿನ ಉದ್ದಗಲಕ್ಕೂ ಪ್ರಚಾರವಾಯಿತು. ಸಂಗೀತ ಆರಾಧಕರು ಮತ್ತು ಅಭಿಮಾನಿಗಳು ನಾಡಿನ ಮೂಲೆಮೂಲೆಯಿಂದ ಬಂದು ತ್ಯಾಗರಾಜರ ದರ್ಶನ ಮಾಡಲಾರಂಭಿಸಿದರು.

ಸಂಗೀತದಿಂದ ದೈವ ಸಾಕ್ಷಾತ್ಕಾರ

ರಾಮನ ಕುರಿತಲ್ಲದೆ ಮತ್ತೊಬ್ಬರ ಕುರಿತು ಕೀರ್ತನೆ ಹಾಡಲಾರೆ ಎಂದಿದ್ದ ತ್ಯಾಗರಾಜರು, ಅನವರತ ರಾಮನಾಮ ಹಾಡುತ್ತಿದ್ದರು. ಭಕ್ತಿ ಹೆಚ್ಚಾಗಿ ಅದು ಸಂಗೀತದ ಮೂಲಕ ಪರಾಕಾಷ್ಠೆ ತಲುಪಿದಾಗ ಪರಮಾತ್ಮ ಒಲಿದ. ಸೀತಾ, ಲಕ್ಷ್ಮಣ, ಭರತ, ಹನುಮಂತ ಸಮೇತ ಭಗವಂತ ಶ್ರೀರಾಮ ದರ್ಶನ ನೀಡಿದ್ದ.

ಆಮಿಷಗಳಿಗೆ ಬಲಿಯಾಗದ ವ್ಯಕ್ತಿತ್ವ

ತ್ಯಾಗರಾಜರಿಗೆ 16ನೇ ವಯಸ್ಸಿನಲ್ಲಿ ವಿವಾಹ ಆಯಿತು. ಆದರೆ ಎಡೆಬಿಡದೆ ಕಾಡುತ್ತಿದ್ದ ಬಡತನದಿಂದ ಬಳಲಬೇಕಾಯಿತು. ಎಂತಹ ಪರಿಸ್ಥಿತಿ ಬಂದಿತ್ತು ಎಂದರೆ ಒಪ್ಪತ್ತಿನ ಊಟಕ್ಕೂ ಪರದಾಡಬೇಕಾಗಿತ್ತು. ಆದರೂ ಅವರು ಶ್ರೀಮಂತಿಕೆಗೆ ಬೆಲೆ ಕೊಡಲಿಲ್ಲ. ರಾಜ ಮಹಾರಾಜರುಗಳಿಂದ ಬಂದ ಆಹ್ವಾನವನ್ನು ತಿರಸ್ಕಾರ ಮಾಡಿದ್ದರು.