ನ್ಯೂಸ್

ಅಬ್ಬಾ...ಈ 100 ವರ್ಷದ ಅಜ್ಜೀದು ಏನು ಕ್ರಿಮಿನಲ್​ ಆಸೆ ಅಂತೀರಿ? ಕೊನೆಗೂ ಅರೆಸ್ಟ್ ಆಗೇಬಿಟ್ರು..ಅದೂ ಬರ್ತ್​ ಡೇ ದಿನಾನೇ..!

100ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಅಜ್ಜಿಯನ್ನು ಪೊಲೀಸರು ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ. ಆಕೆಯಿದ್ದ ವೃದ್ಧಾಶ್ರಮಕ್ಕೆ ಆಗಮಿಸಿದ ಪೊಲೀಸರು, ಕೈಗೆ ಕೋಳ ಹಾಕಿ, ಕಾರಿನಲ್ಲಿ ಕೂರಿಸಿಕೊಂಡು ಸ್ಟೇಶನ್​ಗೆ ಕರೆದುಕೊಂಡು ಹೋದ ಘಟನೆ ಯುಎಸ್​ನಲ್ಲಿ ನಡೆದಿದೆ...!

ಇಷ್ಟೆಲ್ಲ ಮಾಡಿದ್ದು ಅಜ್ಜಿ ಅಪರಾಧ ಮಾಡಿದ್ದಾರೆ ಎಂದು ಅಲ್ಲ. ಅವರದ್ದೇ ಆಸೆಯನ್ನು ನೆರವೇರಿಸಿದ್ದಾರೆ ಅಷ್ಟೇ. ರುತ್​ ಬ್ರ್ಯಾಂಟ್​ ಎಂಬ ವೃದ್ಧೆ 100 ನೇ ವರ್ಷದ ಹುಟ್ಟುಹಬ್ಬದಂದು ತಮ್ಮ ಜೀವಮಾನದ ಆಸೆಯನ್ನು ಪೊಲೀಸರ ಮೂಲಕ ಈಡೇರಿಸಿಕೊಂಡಿದ್ದಾರೆ.

ಬ್ರ್ಯಾಂಟ್​ ತಮ್ಮ ನೂರನೇ ಬರ್ತ್​ ಡೇ ನಿಮಿತ್ತ ಜೈಲಿಗೆ ಹೋಗಬೇಕು ಎಂದು ಬಯಸಿದ್ದರು. ಈ ಆಸೆಯನ್ನು ಕೇಳಿ ಅಲ್ಲಿದ್ದವರು ಹೌಹಾರಿದರೂ ಕೂಡ ಅದನ್ನು ಈಡೇರಿಸಲಾಯಿತು. ಅಜ್ಜಿ ಇದ್ದ ನೆರವು ಕೇಂದ್ರಕ್ಕೆ ಬಂದ ಇಬ್ಬರು ಪೊಲೀಸರು, ಆಕೆಯ ವಾಕರ್ ಮತ್ತು ಕೈ ಸೇರಿ ಕೋಳ ತೊಡಿಸಿದರು. ಹಾಗೇ ಅಜ್ಜಿಯನ್ನು ಪೊಲೀಸ್ ಕಾರಿನಲ್ಲಿ ಕೂರಿಸಿಕೊಂಡು, ಥೇಟ್​ ಕೈದಿಯನ್ನು ಕರೆದುಕೊಂಡು ಹೋಗುವಂತೆ, ಕಾರಿನ ದೀಪವನ್ನು ಹೊತ್ತಿಸಿಕೊಂಡು, ಸೈರನ್​ ಮಾಡುತ್ತ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ.

ಈ ಅಜ್ಜಿ ಕೂಡ ತಾನೂ ನಿಜವಾಗಿಯೂ ಅರೆಸ್ಟ್ ಆಗುತ್ತಿದ್ದೇನೆ ಎಂದೆನ್ನಿಸುವಂತೆ ಸಖತ್​ ನಾಟಕ ಆಡಿದ್ದಾರೆ. ಬಂಧಿಸಲು ಬಂದ ಪೊಲೀಸರಿಗೆ ಫನ್ನಿಯಾಗಿ ಒದ್ದಿದ್ದಾರೆ. ಆದರೆ ಅದರಲ್ಲಿ ಓರ್ವ ಪೊಲೀಸ್ ಅಧಿಕಾರಿಗೆ ಮೊಣಕಾಲು ನೋವು ಇರುವ ಕಾರಣ, ವೃದ್ಧೆಯ ಒದೆ ಸಿಕ್ಕಾಪಟೆ ಇರಿಟೇಟ್​ ಮಾಡಿದೆ. ಹೀಗೆಲ್ಲ ಒದೆಯಬೇಡಿ. ನನಗೆ ಒಂದು ಕಾಲಿನ ಮಂಡಿ ನೋವಿದೆ ಎಂದು ಆತ ವಾರ್ನ್ ಬೇರೆ ಮಾಡಿದ್ದಾನೆ. ಅದಕ್ಕೆ ಪ್ರತಿಯಾಗಿ ಅಜ್ಜಿ, ನನಗೆ ಎರಡೂ ಕಾಲುಗಳ ಮಂಡಿ ನೋವಿದೆ ಎಂದು ಉತ್ತರಿಸಿದ್ದಾರೆ.

ರುತ್​ ಬ್ರ್ಯಾಂಟ್​ ಸ್ವಲ್ಪ ಸಮಯ ಜೈಲಿನಲ್ಲಿ ಕಳೆದು ಫೋಟೋವನ್ನು ತೆಗೆದುಕೊಂಡರು. ಬಳಿಕ ಪರ್ಸನ್​ ಕೌಂಟಿ ಜೈಲ್ ಎಂದು ಬರೆದುಕೊಂಡಿದ್ದ ಕಿತ್ತಳೆ ಬಣ್ಣದ ಟಿ ಶರ್ಟ್ ಧರಿಸಿಕೊಂಡು ವಾಪಸ್​ ಬಂದಿದ್ದಾರೆ. ಹೀಗೆ ವೃದ್ಧೆ ಮರಳಿ ನೆರವು ಕೇಂದ್ರಕ್ಕೆ ಹೋಗುವಾಗ ಪೊಲೀಸರು ಕೇಕ್​ ಕೂಡ ಕೊಟ್ಟು ಕಳಿಸಿದ್ದಾರೆ. (ಏಜೆನ್ಸೀಸ್​)