ಬೈಲಕುಪ್ಪೆ: ರಾಜ್ಯದ ನಂದಿನಿ ಹಾಲಿನ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿದ್ದು, ವ್ಯಾಪಕವಾಗಿ ಹೆಸರು ಸಂಪಾದಿಸುವ ಮೂಲಕ ಗುಣಮಟ್ಟ ಕಾಯ್ದಿರಿಸಿಕೊಂಡಿದೆ ಎಂದು ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಹೇಳಿದರು.
ಆವರ್ತಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ರೈತರು ಹಾಗೂ ಹೈನುಗಾರರು ಕಟ್ಟಿ ಬೆಳೆಸಿದ ಸಂಸ್ಥೆ ರಾಷ್ಟ್ರ ಮಟ್ಟದಲ್ಲಿ ಬೆಳೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಹೈನುಗಾರರು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಹಕಾರ ನೀಡಬೇಕು ಎಂದು ತಿಳಿಸಿದರು.
ಮೈಸೂರು ಜಿಲ್ಲಾ ಹಾಲು ಒಕ್ಕೂಟ ಕಳೆದ ಎರಡೂವರೆ ವರ್ಷದಿಂದ ಹಾಲಿಗೆ ದರವನ್ನು ಹೆಚ್ಚು ಮಾಡಿಕೊಂಡು ಬಂದಿದೆ. ಇದುವರೆಗೆ ಒಂದು ರೂಪಾಯಿ ಕೂಡ ಕಡಿಮೆ ಮಾಡಿಲ್ಲ. ಸರ್ಕಾರ ನೀಡುತ್ತಿರುವ 5 ರೂ. ಪ್ರೋತ್ಸಾಹ ಧನವನ್ನು 7ರೂ.ಗೆ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದೇವೆ. ಒಕ್ಕೂಟದಿಂದ 55 ಸಾವಿರ ರಾಸುಗಳಿಗೆ ವಿಮೆ ಮಾಡಿಸಲಾಗಿದೆ. ಈ ಬಾರಿ 75ರಿಂದ 80 ಸಾವಿರ ಹಸುಗಳಿಗೆ ವಿಮೆ ಮಾಡಿಸುವ ಬಗ್ಗೆ ಗುರಿ ಇದೆ ಎಂದರು.
ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಮೂವರು ಉತ್ಪಾದಕರಿಗೆ ಸನ್ಮಾನಿಸಿ ಬಹುಮಾನ ನೀಡಲಾಯಿತು.
ಮೈಮುಲ್ ನಿರ್ದೇಶಕ ರಾಜೇಂದ್ರ, ಸಂಘದ ಅಧ್ಯಕ್ಷ ಎ.ಸಿ.ಶಿವಪ್ರಕಾಶ್, ಉಪಾಧ್ಯಕ್ಷ ಲೋಕೇಶ್, ನಿರ್ದೇಶಕರಾದ ಎ.ಎಸ್.ರಾಜಶೇಖರಯ್ಯ, ಈಶ್ವರ, ಎ.ಎಸ್.ಯೋಗಾನಂದ, ಎಸ್.ಎ.ಚಂದ್ರಶೇಖರ, ಮಲ್ಲಿಕಾರ್ಜುನ, ಸರೋಜಮ್ಮ, ರತ್ನಮ್ಮ, ಮೈಮುಲ್ ವಿಸ್ತರಣಾಧಿಕಾರಿ ಆಕಾಶ್, ಸಹಾಯಕ ವ್ಯವಸ್ಥಾಪಕ ಡಾ.ಸತೀಶ್, ಕಾರ್ಯದರ್ಶಿ ಟಿ.ಕುಮಾರ್, ಸಿಬ್ಬಂದಿ ಎಸ್.ಬಿ.ರೇವಣ್ಣ, ಜಿ.ಸಿ.ಸೋಮಶೇಖರ ಇತರರು ಇದ್ದರು.