ವಿಜಯವಾಣಿ ವಿಶೇಷ ಮಂಡ್ಯ: ಪಿಎಸ್ಎಸ್ಕೆ ಕಾರ್ಖಾನೆಯನ್ನು 40 ವರ್ಷಗಳ ಕಾಲ ಗುತ್ತಿಗೆಗೆ ಪಡೆದು, ಕಬ್ಬು ಅರೆಯುವಿಕೆ ಆರಂಭಿಸಲು ಸಿದ್ಧತೆ ಮಾಡುತ್ತಿರುವ ನಿರಾಣಿ ಗ್ರೂಪ್ಸ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ, ಮೈಶುಗರ್ ವಹಿಸಿಕೊಳ್ಳುವುದಕ್ಕೂ ಆಸಕ್ತಿ ತೋರಿದ್ದಾರೆ.
ಸೋಮವಾರ ನಗರದಲ್ಲಿ ರೈತರ ಜತೆ ಮಾತನಾಡಿದ ಅವರು, ಇಡೀ ದೇಶಕ್ಕೆ ಮೊದಲು ಸಕ್ಕರೆ ಉತ್ಪಾದನೆ ಮಾಡಿ ಕೊಟ್ಟ ಮೈಶುಗರ್ ಕಾರ್ಖಾನೆಯನ್ನು ಉತ್ತಮವಾಗಿ ನಡೆಸಿದ ಹೆಗ್ಗಳಿಕೆಗಾಗಿ ಪ್ರಯತ್ನಿಸಿದ್ದೇನೆ. ಸರ್ಕಾರ ಅವಕಾಶ ಕಲ್ಪಿಸಿದರೆ, ತಕ್ಷಣ ಕಾರ್ಖಾನೆ ಆರಂಭಕ್ಕೆ ಸಿದ್ಧತೆ ಮಾಡುತ್ತೇನೆ. ಸರ್ಕಾರದ ಷರತ್ತುಗಳ ಜತೆಗೆ 25 ಕೋಟಿ ರೂ. ಠೇವಣಿ ಇಡುತ್ತೇನೆ. ಸರಿಯಾಗಿ ನಡೆಸದೆ, ರೈತರಿಗೆ ತೊಂದರೆ ಮಾಡಿದರೆ ಆ ಹಣವನ್ನು ಮುಟ್ಟುಗೋಲು ಹಾಕಿಕೊಂಡು ನನ್ನನ್ನು ಕಾರ್ಖಾನೆಯಿಂದ ಹೊರಗೆ ಕಳಿಸಲಿ ಎಂದರು. ಇದನ್ನೂ ಓದಿ: ಡಿ.ಕೆ.ಶಿ. ಪದಗ್ರಹಣ ಸಮಾರಂಭ ಮಾಡೇ ಮಾಡ್ತೀವಿ: ಸರ್ಕಾರಕ್ಕೆ ಸಿದ್ದರಾಮಯ್ಯ ಸೆಡ್ಡು!
ಗತವೈಭವ ಮೆರೆದ ಮೈಶುಗರ್ ಕಾರ್ಖಾನೆ ಉಳಿಸಿ, ಬೆಳೆಸುವ ಕನಸು ನನ್ನದು. ಪ್ರಮುಖವಾಗಿ ಇದಕ್ಕೆ ಸ್ಥಳೀಯರ ಸಂಪೂರ್ಣ ಸಹಕಾರ ಬೇಕು. ವಿರೋಧ ಕಟ್ಟಿಕೊಂಡು, ಪ್ರತಿಭಟನೆ ಎದುರಿಸಿಕೊಂಡು ಕಾರ್ಖಾನೆಯನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗದು. ನಾನು 6 ಕಾರ್ಖಾನೆಗಳನ್ನು ನಡೆಸುತ್ತಿದ್ದು, 26 ಲಕ್ಷ ಟನ್ ಕಬ್ಬು ಅರೆದು, ಬಟವಾಡೆ ಮಾಡಿ, ಕೇವಲ 36 ಕೋಟಿ ರೂ. ಮಾತ್ರ ಬಾಕಿ ಉಳಿಸಿಕೊಂಡಿದ್ದೇನೆ. ಅದನ್ನೂ ಶೀಘ್ರದಲ್ಲೇ ಬಟವಾಡೆ ಮಾಡಲಿದ್ದೇನೆ. ಅನಗತ್ಯ ಆರೋಪಗಳಿಗೆ ಕಿವಿಗೊಡುವುದಿಲ್ಲ ಎಂದವರು ತಿಳಿಸಿದರು.
ಈ ಮಾತುಗಳನ್ನು ಕೇಳಿದ ಅನೇಕ ರೈತರು ಸರ್ಕಾರದ ಮೇಲೆ ಒತ್ತಡ ಹಾಕಲು ಸಿದ್ಧತೆ ಆರಂಭಿಸಿದ್ದು, ಸದ್ಯದಲ್ಲೇ ಆಂದೋಲನ ಆರಂಭವಾಗುವ ಸಾಧ್ಯತೆಗಳಿವೆ.
120 ಎಕರೆ ಜಾಗ ಕೊಟ್ಟರೆ ಹೊಸ ಕಾರ್ಖಾನೆ: ಮಂಡ್ಯ ಜಿಲ್ಲೆಯಲ್ಲಿ 120 ಎಕರೆ ಜಾಗ ಕೊಟ್ಟರೆ ಹೊಸ ಕಾರ್ಖಾನೆ ಮಾಡಲು ಸಿದ್ಧನಿದ್ದೇನೆ. 120 ಎಕರೆಗೆ 60 ಕೋಟಿ ರೂ., ಕಾರ್ಖಾನೆಗೆ 200 ಕೋಟಿ ರೂ. ಬೇಕಾಗುತ್ತದೆ. ಮೈಶುಗರ್ ಕಾರ್ಖಾನೆ ಕೊಡದೆ ಜಾಗ ಕೊಟ್ಟಲ್ಲಿ ಮುಂದಿನ ಸಾಲಿನ ವೇಳೆಗೆ ಹೊಸ ಕಾರ್ಖಾನೆ ಮಾಡಿ ಕಬ್ಬು ಅರೆಯಲಾಗುವುದು ಎಂದು ಮುರುಗೇಶ್ ನಿರಾಣಿ ಹೇಳಿದರು. 165 ಕೋಟಿ ರೂ. ಟೆಂಡರ್ಗೆ 405 ಕೋಟಿ ರೂ. ಸಲ್ಲಿಸಿದ್ದೀರಿ, ಲಾಭ ಹೇಗೆ ಗಳಿಸುತ್ತೀರಿ ಎಂದು ರೈತರೊಬ್ಬರು ಪ್ರಶ್ನಿಸಿದಾಗ, ಕಾರ್ಬನ್ ಡೈ ಆಕ್ಸೈಡ್ ಉತ್ಪಾದನೆ ಮಾಡುತ್ತೇವೆ. ಇದನ್ನೂ ಓದಿ: ಎಲ್ಲಿದ್ದೀಯಮ್ಮ… ಪರೀಕ್ಷೆ ಬರೆಯಲು ಬಾರಮ್ಮ… ಮದುವೆ ಆಮೇಲೆ ಮಾಡ್ಕೊಳೀವಂತೆ!
ವಿಮಾನಗಳಿಗೆ ಅಗತ್ಯವಿರುವ ಪೆಟ್ರೊಲ್ ಉತ್ಪಾದನೆ ಮಾಡುತ್ತೇವೆ. ವಿಮಾನದ ಪೆಟ್ರೋಲ್ ಲೀಟರ್ಗೆ 150 ರೂ. ಇದೆ. ಇಥೆನಾಲ್ ಉತ್ಪಾದಿಸಿ ಲೀಟರನ್ನು 100 ರೂ.ಗೆ ಮಾರಾಟ ಮಾಡುತ್ತೇವೆ ಎಂದವರು ವಿವರಿಸಿದರು.
ನಿರಾಣಿ ಗ್ರೂಪ್ಸ್ ಕಾರ್ಖಾನೆ ವ್ಯಾಪ್ತಿಯ ರೈತರಿಗೆ ವಿಮೆ ವ್ಯವಸ್ಥೆ ಮಾಡಿಸಿದ್ದು, ನಾಲ್ವರು ಇರುವ ಕುಟುಂಬ 1200 ರೂ. ಪಾವತಿಸಬೇಕು. ಕಟ್ಟಲು ಶಕ್ತರಲ್ಲದ ಕುಟುಂಬಗಳಿಗೆ ಕಾರ್ಖಾನೆಯಿಂದಲೇ ಭರಿಸುತ್ತೇವೆ. ನಾಲ್ವರ ಪೈಕಿ ಯಾರಿಗೆ ಆದರೂ ಅನಾರೋಗ್ಯವಾದಲ್ಲಿ 25000 ರೂ ಅನ್ನು ವಿಮಾ ಸಂಸ್ಥೆ ಭರಿಸುತ್ತದೆ. ಸಹಜವಾಗಿ ಮೃತಪಟ್ಟರೆ 1 ಲಕ್ಷ ರೂ., ಅಪಘಾತದಿಂದ ಮೃತಪಟ್ಟರೆ 5 ಲಕ್ಷ ರೂ. ವಿಮೆ ಹಣ ಸಿಗಲಿದೆ ಎಂದು ನಿರಾಣಿ ಹೇಳಿದರು.