ಮೈಸೂರು: ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರು ಇಂದು ಮೈಸೂರಿನಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಮೈಸೂರಿನಲ್ಲಿ ಕಿಚ್ಚ ಸುದೀಪ್ ಬಡಮಕ್ಕಳನ್ನು ಭೇಟಿಯಾಗಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅರ್ಜುನವರ ಜ್ಯುವೆಲರ್ಸ್ ಕಡೆಯಿಂದ ಒಂದು ದಿನದ ಈ ಕಾರ್ಯಕ್ರಮದಲ್ಲಿ ನಟ ಸುದೀಪ್ ಅವರು ಇದೀಗ ಮೈಸೂರಿನಲ್ಲಿ ನಿರ್ಗತಿಕ ಮಕ್ಕಳ ಜತೆ ಕಾಲ ಕಳೆಯುತ್ತಿದ್ದಾರೆ. ಸಾಧ್ಯವಾದಷ್ಟೂ ಮಕ್ಕಳಿಗೆ ಸ್ವತಃ ತಾವೇ ತಿಂಡಿಯನ್ನು ತಮ್ಮ ಕೈಯಾರೆ ಕೊಡುತ್ತಿರುವ ನಟ ಕಿಚ್ಚ ಸುದೀಪ್ ಅವರನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಮಕ್ಕಳು ಸ್ಟಾರ್ ನಟ ಸುದೀಪ್ ಅವರನ್ನು ಹತ್ತಿರದಿಂದ ನೋಡಿ, ಮುಟ್ಟಿ ಮಾತನಾಡಿಸಿ ಬಹಳಷ್ಟು ಖುಷಿ ಪಟ್ಟಿದ್ದಾರೆ. ಜತೆಗೆ, ಅವರೇ ತಮ್ಮ ಕೈಯಾರೆ ಕೊಟ್ಟ ತಿಂಡಿ ತಿಂದು ಹರ್ಷ ಗೊಂಡಿದ್ದಾರೆ.
ಕಿಚ್ಚ ಸುದೀಪ್ ಸದ್ಯ ಮ್ಯಾಕ್ಸ್ ಸಿನಿಮಾದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಬಹುಪಾಲು ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿಯೂ ಈ ಸಿನಿಮಾ ತಂಡ ತೊಡಗಿಸಿಕೊಂಡಿದೆ. ಇದೀಗ ಸಿಕ್ಕ ಗ್ಯಾಪ್‌ನಲ್ಲಿಯೇ ಮ್ಯಾಕ್ಸ್ ಬಳಿಕ ಕಿಚ್ಚ ಸುದೀಪ್ ಯಾವ ಸಿನಿಮಾಕ್ಕೆ ಚಾಲನೆ ನೀಡಲಿದ್ದಾರೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ.
ಸುದೀಪ್ ಅವರ ಹೊಸ ಸಿನಿಮಾವೊಂದರ ಅಪ್‌ಡೇಟ್ ಸಹ ಹೊರಬಿದ್ದಿದ್ದು, ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ನಿರ್ಮಾಪಕ ಎನ್ ಸಂದೇಶ್ ಹಾಗೂ ಅವರ ತಂದೆ ಮತ್ತು ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ಮತ್ತು ಮ್ಯಾಕ್ಸ್ ಹೀರೋ ಸುದೀಪ್ ಮನೆಗೆ ತೆರಳಿ ಕಿಚ್ಚನನ್ನು ಭೇಟಿಯಾಗಿದ್ದಾರೆ.