ಸಾಂಘಿಕ ಪ್ರದರ್ಶನ ಮುಂದುವರಿಸಿರುವ ಮೈಸೂರು ವಿಭಾಗ ತಂಡವು ರಾಜ್ಯ ಮಟ್ಟದ ‘ದಸರಾ ಕ್ರೀಡಾಕೂಟ ಸಿಎಂ ಕಪ್’ನ ಪುರುಷರ ಖೋಖೋ ಪಂದ್ಯಾವಳಿಯಲ್ಲಿ ಗೆಲುವಿನ ಓಟ ಮುಂದುವರಿಸಿದೆ.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶನಿವಾರ ಬೆಳಗಾವಿ ವಿರುದ್ಧದ ಲಿಂಗ್ ಪಂದ್ಯದಲ್ಲಿ 19-14 ಅಂಕಗಳಿಂದ ಭರ್ಜರಿ ಜಯ ಸಾಧಿಸಿತು. ಆದರೆ, ರೋಚಕತೆಯಿಂದ ಕೂಡಿದ್ದ ಮತ್ತೊಂದು ಲೀಗ್ ಪಂದ್ಯದಲ್ಲಿ ಮೈಸೂರು ವಿಭಾಗ ತಂಡವು 15-15 ಅಂಕಗಳಿಂದ ಬೆಂಗಳೂರು ಗ್ರಾಮಾಂತರ ತಂಡದ ವಿರುದ್ಧ ಡ್ರಾ ಸಾಧಿಸಿತು.
ಮತ್ತೊಂದು ಲೀಗ್ ಪಂದ್ಯದಲ್ಲಿ ಬೆಂಗಳೂರು ನಗರ ವಿಭಾಗ ತಂಡವು 15-4 ಅಂಕಗಳಿಂದ ಕಲಬುರಗಿ ಜಯ ಸಾಧಿಸಿದರೆ, ಬೆಂಗಳೂರು ಗ್ರಾಮಾಂತರ ತಂಡವು 16-11 ಅಂಕಗಳಿಂದ ಕಲಬುರಗಿ ತಂಡವನ್ನು ಮಣಿಸಿತು.
ಎರಡು ಜಯ: ಖೋ ಖೋ ಮಹಿಳಾ ವಿಭಾಗದಲ್ಲಿ ಮೈಸೂರು ವಿಭಾಗ ತಂಡವು ಎರಡು ಲೀಗ್‌ಗಳಲ್ಲಿ ಜಯ ಸಾಧಿಸಿ ಪ್ರಾಬಲ್ಯ ಮುಂದುವರೆಸಿತು. ಮೊದಲ ಪಂದ್ಯದಲ್ಲಿ 18-3 ಅಂಕಗಳಿಂದ ಬೆಳಗಾವಿ ತಂಡವನ್ನು ಸೋಲಿಸದ ಮೈಸೂರು ತಂಡ, ಎರಡನೇ ಪಂದ್ಯದಲ್ಲಿ ಬೆಂಗಳೂರು ಗ್ರಾಮಾಂತರ ತಂಡದ ವಿರುದ್ಧ 15-2 ಅಂಕಗಳಿಂದ ಭರ್ಜರಿ ಜಯ ಸಾಧಿಸಿತು. ಇನ್ನು ದಿನದ ಮೊದಲ ಲೀಗ್‌ನಲ್ಲಿ ಬೆಂಗಳೂರು ಗ್ರಾಮಾಂತರ ತಂಡದ ವಿರುದ್ಧ 11-7 ಅಂಕಗಳಿಂದ ಜಯ ಸಾಧಿಸಿದ್ದ ಕಲಬುರಗಿ ತಂಡವು ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ನಗರ ತಂಡದ ವಿರುದ್ಧ 1 ಅಂಕಗಳಿಂದ ಸೋಲು ಅನುಭವಿಸಿತು.