ಶ್ರೀರಂಗಪಟ್ಟಣ : ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಿಂದ ಹೊರಟು ಶ್ರೀರಂಗಪಟ್ಟಣ ತಲುಪಿ ವಾಸ್ತವ್ಯ ಹೂಡಿದ್ದ ಬಿಜೆಪಿ-ಜೆಡಿಎಸ್ ದೋಸ್ತಿಗಳ ಮೈಸೂರು ಚಲೋ ಪಾದಯಾತ್ರೆ ಶುಕ್ರವಾರ ನಾರಿಮಣಿಯರ ಶಕ್ತಿಯ ಹುರುಪಿನೊಂದಿಗೆ ಮೈಸೂರು ಕಡೆಗೆ ಸಾಗಿತು.
ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟಿಎಪಿಸಿಎಂಎಸ್ ಕಲ್ಯಾಣ ಮಂಟಪ ಮುಂಭಾಗದಿಂದ 11.20ಕ್ಕೆ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಚಿತ್ರನಟಿ ಮಾಳವಿಕಾ ಸೇರಿದಂತೆ ಪ್ರಮುಖ ನಾಯಕಿಯರು ಕೈಯಲ್ಲಿ ಒನಕೆ ಹಿಡಿದು ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಚಾರಗಳ ವಿರುದ್ಧ ಸರಣಿ ಘೋಷಣೆ ಕೂಗುವ ಜತೆಗೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದರು.
ಜಾನಪದ ಕಲಾತಂಡಗಳು, ತಮಟೆ-ನಗಾರಿ ವಾದ್ಯಗಳು ಹಾಗೂ ವೇಷಧಾರಿ ಕಲಾವಿದರ ಜತೆಗೆ ಡಿಜೆ ಹಾಡುಗಳಿಗೆ ಕಾರ್ಯಕರ್ತರು ಕುಣಿದರು. ಮಹಿಳೆಯರು ಪರಸ್ಪರ ಕೈ ಕೈ ಹಿಡಿದು ನೃತ್ಯ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಇತರ ನಾಯಕರು ಬೆಳಗ್ಗೆ 11.20ಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಮೈಸೂರು ಕಡೆಗೆ ಪಾದಯಾತ್ರೆ ತಡವಾಗಿ ಚಾಲನೆ ಪಡೆದುಕೊಂಡಿತು. ಪಟ್ಟಣದ ಆರ್‌ಎಂಸಿ ಚೆಕ್‌ಪೋಸ್ಟ್ ಗೇಟ್ ಸಮೀಪಿಸುತ್ತಿದ್ದಂತೆ ಸಾವಿರಾರು ಮಹಿಳೆಯರೊಂದಿಗೆ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಆಗಮಿಸಿದ ಮಾಜಿ ಸಚಿವರಾದ ಸಿ.ಟಿ.ರವಿ, ಅಶ್ವತ್ಥನಾರಾಯಣ್, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಹಾಗೂ ಯುವನಾಯಕ ಎಸ್.ಸಚ್ಚಿದಾನಂದ ಅವರುಗಳಿಗೆ ಅನಾನಸ್ ಹಣ್ಣುಗಳ ಬೃಹತ್ ಹಾರವನ್ನು ಹಾಕುವ ಮೂಲಕ ಭವ್ಯ ಸ್ವಾಗತದೊಂದಿಗೆ ಬೀಳ್ಕೊಡಲಾಯಿತು.
ಶಾಸಕರಾದ ಹರೀಶ್ ಪೂಂಜ, ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕರಾದ ಸುನೀಲ್ ನಾಯಕ್, ಕುಡುಚಿ ಪಿ.ರಾಜೀವ್ ಸೇರಿದಂತೆ ಹಲವರು ಸಾಗಿದರು. ಈ ವೇಳೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಡೆಗೆ ಸಾಕಷ್ಟು ಜನರು ನುಗ್ಗಿ ಬಂದ ಹಿನ್ನ್ನೆಲೆ ನೂಗುನುಗ್ಗಲು ಏರ್ಪಟ್ಟು ಕೆಲಕಾಲ ತಳ್ಳಾಟ ನೂಕಾಟ ಸಹ ಉಂಟಾಯಿತು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮೈಸೂರು ಸಂಸದ ರಾಜವಂಶಸ್ಥ ಯುದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ ಹಲವರ ಸೇರ್ಪಡೆಯಾದರು.
ಜೆಡಿಎಸ್ ಶಕ್ತಿ ಪ್ರದರ್ಶನ: ಮುಂದೆ ಸಾಗಿಹೋದ ಬಿಜೆಪಿ ಹಿಂದೆ ಜೆಡಿಎಸ್‌ನ ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಪಾದಯಾತ್ರೆ ನೇತೃತ್ವ ವಹಿಸಲು ಪಕ್ಷದ ಯುವ ನೇತಾರ ನಿಖಿಲ್ ಕುಮಾರಸ್ವಾಮಿ ಶ್ರೀರಂಗಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತು.
ಟ್ರಾಫಿಕ್ ಸಮಸ್ಯೆ: ಪಟ್ಟಣದಲ್ಲಿ ಶುಕ್ರವಾರ ಸಹಸ್ರರಾರು ಸಂಖ್ಯೆಯ ಜನರಿಂದ ನಡೆದ ಮೈಸೂರು ಚಲೋ ಪಾದಯಾತ್ರೆಯಿಂದ ಸುಮಾರು 3 ಕಿ.ಮೀ.ದೂರ ಎರಡು ಬದಿಯಲ್ಲೂ ಎಲ್ಲ ರೀತಿಯ ವಾಹನ ಸವಾರರು ಟ್ರಾಫಿಕ್ ಸಮಸ್ಯೆಗೆ ಸಿಲುಕಿ ಕಿರಿಕಿರಿ ಅನುಭವಿಸುವಂತಾಯಿತು. ಬಿಜೆಪಿ-ಜೆಡಿಎಸ್‌ನ ಅಂಸಖ್ಯಾತ ಕಾರ್ಯಕರ್ತರು ಹೆದ್ದಾರಿಯ ಎರಡು ಬದಿಗಳಲ್ಲೂ ಸಾಗಿದ ಹಿನ್ನೆಲೆಯಲ್ಲಿ ಪೊಲೀಸರು ಟ್ರಾಫಿಕ್ ದಟ್ಟಣೆ ನಿವಾರಿಸುವಲ್ಲಿ ಹೈರಾಣಾದರು.
ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ಯುವಮುಖಂಡ ದರ್ಶನ್ ಲಿಂಗರಾಜು, ಜಿಲ್ಲಾ ಕಾರ್ಯದರ್ಶಿ ಟಿ.ಶ್ರೀಧರ್, ಕೆ.ಎಸ್.ನಂಜುಂಡೇಗೌಡ, ಟೌನ್ ಮುಖಂಡರಾದ ಮಂಜನಾಥ್, ಹೇಮಂತ್, ಕಿರಣ್ ಸಿಂಗ್, ಸನತ್, ಮದನ್, ಪ್ರೇಮ್ ಸೇರಿದಂತೆ ಇತರರು ಭಾಗಿಯಾಗಿದ್ದರು.