ಹಾವೇರಿ; ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ನೆಲೆಸಿರುವ ಮಾಲತೇಶ ದೇವರ ಕಾರ್ಣೀಕೋತ್ಸವ ಇಂದು (ಅ.01) ವಿಜೃಂಭಣೆಯಿಂದ ಜರುಗಿತು. ಈ ಐತಿಹಾಸಿಕ ಜಾತ್ರೆಯಲ್ಲಿ ಸುಕ್ಷೇತ್ರ ದೇವರಗುಡ್ಡದ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನದ ಗೊರವಯ್ಯ ನುಡಿದ ಕಾರ್ಣಿಕ ನುಡಿ ಈ ವರ್ಷದ ನಾಡಿನ ಭವಿಷ್ಯವನ್ನು ಸಾರಿದೆ.
ಇದನ್ನೂ ಓದಿ: ಕೆಮ್ಮಿನ ಸಿರಪ್ ಸೇವಿಸಿ ಮೂತ್ರಪಿಂಡ ವೈಫಲ್ಯದಿಂದ ಆರು ಮಕ್ಕಳು ಬಲಿ; ತನಿಖೆ ಆರಂಭಿಸಿದ ಕೇಂದ್ರ| Madhya Pradesh
ದಸರಾ ಹಬ್ಬದ ನಿಮಿತ್ತ 9 ದಿನಗಳ ಕಾಲ ಉಪವಾಸ ವೃತ ಆಚರಣೆ ಮಾಡಿದ ಗೊರವಯ್ಯ ನಾಗಪ್ಪಜ್ಜ ಊರ್ಮಿಯವರು ಇಂದು ಬೆಳಗ್ಗೆ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ವೇಳೆ ದೇವಸ್ಥಾನದಿಂದ ಕಾರ್ಣಿಕ ನುಡಿಯುವ ಸ್ಥಳವಾದ ಕರಿಯಾಲಕ್ಕೆ ಬಂದು ಲಕ್ಷಾಂತರ ಭಕ್ತ ಸಮೂಹದ ನಡುವೆ ಬಿಲ್ಲನ್ನೇರಿ ಕಾರ್ಣಿಕ ನುಡಿದರು. ಗೊರವಯ್ಯನವರು 20 ಅಡಿ ಎತ್ತರದ ಬಿಲ್ಲನ್ನೇರಿ ನಿಂತು, 'ನಾಡು ಬಂಗಾರದ ಗಿಂಡಿಲೇ.. ನಾಡು ಸಿರಿಯಾಗೀತಲೇ ಪರಾಕ್!' ಎಂದು ಭವಿಷ್ಯವಾಣಿ ನುಡಿದಿದ್ದಾರೆ.
ಗೊರವಯ್ಯನವರ ಈ ದೈವವಾಣಿಯನ್ನು ಕ್ಷೇತ್ರದ ವಿದ್ವಾಂಸರು ಮತ್ತು ಭಕ್ತರು ವಿಶ್ಲೇಷಿಸಿದ್ದಾರೆ. ನಾಡಿನ ಜನತೆ ವಿದೇಶಿ ವಸ್ತು ಬಹಿಷ್ಕರಿಸಿ ಸ್ವದೇಶಿ ವಸ್ತು ಬಳಕೆಗೆ ಮುಂದಾಗಲಿದ್ದಾರೆ. ದೇಶ ಶಾಂತಿ, ಸಮೃದ್ಧಿಯಿಂದ ಇರಲಿದೆ. ಮಳೆ ಬೆಳೆ ಚನ್ನಾಗಿ ಬರಲಿವೆ. ಆರೋಗ್ಯ ಸಂಪತ್ತು ಹೆಚ್ಚಾಗಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಗವಿಸಿದ್ದಪ್ಪ ದ್ಯಾಮಣ್ಣನವರ ಹಾಗೂ ದೇವಸ್ಥಾನ ಕಮಿಟಿ ಚೇರ್ಮನ್ ಭರಮಪ್ಪ ಊರ್ಮಿ ಕಾರ್ಣಿಕ ನುಡಿಯನ್ನು ವಿವರಿಸಿದ್ದಾರೆ.
ಹಾವೇರಿಯ ಪ್ರಸಿದ್ಧ ಶ್ರೀ ಕ್ಷೇತ್ರಗಳಲ್ಲಿ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶಸ್ವಾಮಿ ದೇವಸ್ಥಾನವೂ ಒಂದಾಗಿದೆ. ಈ ದೇವರಗುಡ್ಡದ ಗೊರವಯ್ಯ ನುಡಿಯೆಂದ್ರೇ ತುಂಬಾನೇ ಪ್ರಸಿದ್ಧಿ. ಮಳೆ, ಬೆಳೆ, ರಾಜಕೀಯ, ಅನಾಹುತಗಳ ಬಗ್ಗೆ ಗೊರವಯ್ಯ, ಕಾರ್ಣಿಕ ನುಡಿಯುತ್ತಾರೆ. ಈ ದೇವರು ನುಡಿಯುವ ಭವಿಷ್ಯದ ನುಡಿ ಎಂದೂ ಸುಳ್ಳಾಗಲ್ಲ ಎಂಬ ನಂಬಿಕೆ ಜನರದ್ದಾಗಿದೆ. ಪ್ರತಿವರ್ಷ ಈ ದೇವರು ನುಡಿಯುವ ಕಾರ್ಣಿಕ ನುಡಿಗೆ ಲಕ್ಷಾಂತರ ಭಕ್ತರು ಕಾದು ಕುಳಿತಿರುತ್ತಾರೆ.