ನ್ಯೂಸ್

ಪ್ರೇಯಸಿ ಜತೆಗಿರುವ ಮಗನ ಖಾಸಗಿ ಫೋಟೋಗಳು ವೈರಲ್​: ಸಿಎಂ ಸ್ಟಾಲಿನ್​ ಪುತ್ರ ಉದಯನಿಧಿ ಹೇಳಿದ್ದಿಷ್ಟು…

ಚೆನ್ನೈ: ತಮ್ಮ ಮಗ ಇನ್ಬನಿತಿ, ಗರ್ಲ್​ಫ್ರೆಂಡ್​ ಜತೆ ಇರುವ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಉದಯನಿಧಿ ಸ್ಟಾಲಿನ್​ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉದಯನಿಧಿ, ನನ್ನ ಮಗನಿಗೆ 18 ವರ್ಷ ಮತ್ತು ಇದು ಆತನ ಖಾಸಗಿ ವಿಚಾರ ಎಂದು ಹೇಳಿದ್ದಾರೆ.

ಇದು ನನ್ನ ಮಗನ ವೈಯಕ್ತಿಕ ವಿಷಯ. ವ್ಯಕ್ತಿಯ ವೈಯಕ್ತಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದಕ್ಕೂ ಮಿತಿ ಇದೆ. ನಾನು, ನನ್ನ ಹೆಂಡತಿ ಮತ್ತು ಮಗ ಸಾರ್ವಜನಿಕವಾಗಿ ಚರ್ಚಿಸುವುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು. ಉದಯನಿಧಿ ಅವರ ಉತ್ತರಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಈ ಮಧ್ಯೆ, ತಮಿಳುನಾಡಿನ ಪ್ರತಿಪಕ್ಷಗಳು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿವೆ.

ಕಳೆದ ಜನವರಿಯಲ್ಲಿ ಇನ್ಬನಿತಿ ಮತ್ತು ಅವರ ಗರ್ಲ್​ಫ್ರೆಂಡ್​ ಫೋಟೋಗಳು ಹೊರಬಂದವು. ಚಿತ್ರಗಳು ಎಲ್ಲೆಡೆ ವೈರಲ್ ಆಗಿದ್ದು ಭಾರೀ ವಿವಾದವನ್ನು ಸೃಷ್ಟಿಸಿದೆ. ಈ ವಿಚಾರದಲ್ಲಿ ಉದಯನಿಧಿ ಸ್ಟಾಲಿನ್ ಮತ್ತು ಅವರ ಪತ್ನಿ ಕೃತಿಕಾ ಉದಯನಿಧಿ ತಮ್ಮ ಮಗನನ್ನು ಬೆಂಬಲಿಸಿದ್ದಾರೆ. (ಏಜೆನ್ಸೀಸ್​)