ನ್ಯೂಸ್

ಇನ್ಯಾವತ್ತು ನಮ್ಮ ತಾಯಿ ಅಲ್ಲಿಗೆ ಕಾಲಿಡಲ್ಲ! ಬಾಂಗ್ಲಾ ಜನರಿಗೆ ಖಡಕ್ ತಿರುಗೇಟು ಕೊಟ್ಟ ಹಸೀನಾ ಪುತ್ರ

ಢಾಕಾ: ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗ ಮೀಸಲಾತಿ ವಿವಾದ ತೀವ್ರ ಸ್ವರೂಪ ಪಡೆದಿದ್ದು, ಜನರ ಆಕ್ರೋಶ ಮತ್ತಷ್ಟು ಭುಗಿಲೆದ್ದಿದೆ. ಪ್ರಧಾನಿ ಶೇಖ್​ ಹಸೀನಾ ರಾಜೀನಾಮೆಗೆ ಪಟ್ಟುಹಿಡಿದು ಕೈಗೊಂಡಿದ್ದ ಪ್ರತಿಭಟನೆ ಇದೀಗ ಭಾರೀ ಹಿಂಚಾಚಾರಕ್ಕೆ ತಿರುಗಿದೆ. ಘಟನೆಯಲ್ಲಿ ನಿನ್ನೆಯವರೆಗೆ 300ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ಇಂದು 100ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪ್ರಧಾನಿ ಶೇಖ್​ ಹಸೀನಾ, ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿ, ದೇಶದಿಂದ ಪಲಾಯನ ಮಾಡಿದರು. ಇದೀಗ ಭಾರತದ ಗಾಜಿಯಾಬಾದ್​ನಲ್ಲಿ ಆಶ್ರಯ ಪಡೆದಿರುವ ಅವರು. ತಮ್ಮ ಪುತ್ರನೊಡನೆ ಇದ್ದಾರೆ.

ಢಾಕಾ ಸರ್ಕಾರಿ ಉದ್ಯೋಗ ಮೀಸಲಾತಿ ನೀತಿಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ನಡೆಸಲಾದ ಪ್ರತಿಭಟನೆ ಇದಾಗಿದ್ದು, ಈ ನಿರ್ಧಾರವನ್ನು ತಿರಸ್ಕರಿಸಿದ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಾಯಿತು. ಇದೀಗ ಹಸೀನಾ ರಾಜೀನಾಮೆ ಕೊಟ್ಟಿದ್ದರೂ ಸಹ ಪ್ರತಿಭಟನೆ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಹಿಂದುಗಳ ದೇವಾಲಯಗಳನ್ನು ಗುರಿಯಾಗಿಸಿಕೊಂಡಿರುವ ಪ್ರತಿಭಟನಾಕಾರರು, ಹಿಂದುಗಳು ಉಳಿದುಕೊಂಡಿರುವ ಮನೆಗಳನ್ನು ಕೆಡವಿ, ಧ್ವಂಸಗೊಳಿಸುತ್ತಿದ್ದಾರೆ.

ಸದ್ಯ ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ, ತಮ್ಮ ಪುತ್ರನೊಡನೆ ಹಲವು ವಿಷಯಗಳನ್ನು ಚರ್ಚಿಸಿದ್ದಾರೆ. ಬಾಂಗ್ಲಾದೇಶದ ಜನರ ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿರುವ ಹಸೀನಾ ಪುತ್ರ ಸಜೀಬ್ ವಾಜೆದ್ ಜಾಯ್, "ಇನ್ಯಾವತ್ತು ನಮ್ಮ ತಾಯಿ ಬಾಂಗ್ಲಾಗೆ ಹಿಂತಿರುಗುವುದಿಲ್ಲ. ದೇಶವನ್ನು ಉದ್ಧಾರ ಮಾಡುವ ಎಲ್ಲಾ ಪ್ರಯತ್ನಗಳು ಈಗಾಗಲೇ ಮಾಡಿದ್ದೇವೆ. ಪ್ರತಿಬಾರಿ ದೇಶವನ್ನು ಕಾಪಾಡಿ ನಮಗೂ ಸಾಕಾಗಿದೆ" ಎಂದರು.

"ಮೂಲಭೂತವಾದಿಗಳು ಈಗ ಹಿಂದೂಗಳು ಮತ್ತು ಹಿಂದೂ ದೇವಾಲಯಗಳ ಮೇಲೆ ತಮ್ಮ ಕ್ರೌರ್ಯ ಮೆರೆಯುತ್ತಿದ್ದಾರೆ. ನಮ್ಮ ತಾಯಿ ಅಧಿಕಾರ ಪಡೆಯುವ ಮುನ್ನ ದೇಶವು ಆರ್ಥಿಕವಾಗಿ ಕುಗ್ಗಿ ಹೋಗಿತ್ತು. ಆದ್ರೆ, ಅವರು ಆಡಳಿತ ನಡೆಸಲು ಮುಂದಾದ ನಂತರ ಏಷ್ಯಾ ಖಂಡದಲ್ಲಿಯೇ ಬಾಂಗ್ಲಾ ಹುಲಿಯಂತೆ ಬೆಳದು ನಿಂತಿದ್ದು ಇತಿಹಾಸ. ಸತತವಾಗಿ ಆ ದೇಶಕ್ಕಾಗಿ ಹೋರಾಡಿದ್ದೇವೆ. ಆದ್ರೆ, ಇನ್ಮುಂದೆ ಅದು ಸಾಧ್ಯವಿಲ್ಲ. ನಮಗೆ ಸಾಕಾಗಿದೆ. ಆ ದೇಶದ ಸಮಸ್ತೆ ಅಲ್ಲಿನ ಜನಕ್ಕೆ ಬಿಡುತ್ತೇವೆ" ಎಂದು ಕಟುವಾಗಿ ಹೇಳಿದರು,(ಏಜೆನ್ಸೀಸ್).