ನ್ಯೂಯಾರ್ಕ್: ನನ್ನ ಭಾವಿ ಪತ್ನಿ ಆಕೆಯ ಮಾಜಿ ಪ್ರಿಯಕರ ಹೆಸರನ್ನು ಮದುವೆಗೂ ಮುನ್ನವೇ ಕೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳಬೇಕೆಂದು ಬಯಸಿದ್ದಾಳೆ. ನಾನೇನು ಮಾಡಲಿ ಎಂದು ವ್ಯಕ್ತಿಯೊಬ್ಬ ಅಮೆರಿಕ ಜಾಲತಾಣ ವೇದಿಕೆ ರೆಡಿಟ್ ಸಲಹೆ ನೀಡುವಂತೆ ಕೋರಿರುವುದು ಭಾರೀ ವೈರಲ್ ಆಗಿದೆ.
ಹೆಸರೇಳಲು ಇಚ್ಛಿಸದ ವ್ಯಕ್ತಿ ತನ್ನ ದುಗುಡವನ್ನೆಲ್ಲ ಜಾಲತಾಣದಲ್ಲಿ ಹೊರಹಾಕಿದ್ದಾರೆ. ಭಾವಿ ಪತ್ನಿಯ ಪ್ರಿಯಕರ ಕಳೆದ ತಿಂಗಳು ಮೃತಪಟ್ಟಿದ್ದಾರೆ. ಘಟನೆಯಿಂದ ಆಕೆ ವಿಚಲಿತಗೊಂಡಿದ್ದಾಳೆ. ಪ್ರಿಯಕರ ಸಾವಿನ ಸುದ್ದಿ ಕೇಳಿದ ಬಳಿಕ ಆಕೆ ನನ್ನಿಂದ ಸ್ವಲ್ಪ ದಿನ ಅಂತರ ಕಾಯ್ದುಕೊಂಡಿದ್ದಳು. ಏಕೆಂದರೆ ಆಕೆಯಿಂದ ಅಳು ತಡೆಯಲು ಆಗುತ್ತಿರಲಿಲ್ಲ. ಏಕಾಂಗಿಯಾಗಿರಲು ಬಯಸಿದ್ದಳು. ಬಳಿಕ ಆಕೆ ಸಹೋದರಿಯೊಂದಿಗೆ ಉಳಿಯಲು ಹೊರಟಳು.
ಪ್ರತಿದಿನ ರಾತ್ರಿ ನನ್ನೊಂದಿಗೆ ಮಾತನಾಡುತ್ತಿದ್ದಳು. ಕೇಳಿದಾಗಲೆಲ್ಲ ಆದಷ್ಟು ಬೇಗ ಮನೆಗೆ ಬರುವುದಾಗಿ ಹೇಳುತ್ತಿದ್ದಳು. ನಾನು ಬಲವಂತ ಮಾಡುತ್ತಿರಲಿಲ್ಲ. ಮೂರು ವಾರಗಳ ಬಳಿಕ ಮನೆಗೆ ಮರಳಿದಳು. ಸದ್ಯ ಮೊದಲಿಗಿಂತ ಶಾಂತಳಾಗಿದ್ದಳು. ಇತರೆ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದ್ದ ಆಕೆ ಮಾಜಿ ಪ್ರಿಯಕರನಿಗೆ ಗೌರವ ಸಲ್ಲಿಸುವ ಪ್ಲ್ಯಾನ್ ಮಾಡಿದ್ದರು. ಆದರೆ, ಆಕೆ ತನ್ನ ಪ್ಲ್ಯಾನ್ ಏನು ಎಂದು ಹೇಳಿದಾಗ ನನಗೆ ನಂಬಲೂ ಸಾಧ್ಯವಾಗಲಿಲ್ಲ. ತನ್ನ ಎಡಗೈಯಲ್ಲಿ ಪ್ರಿಯಕರ ಟ್ಯಾಟೂ ಹಾಕಿಸಿಕೊಳ್ಳಲು ಬಯಸಿರುವುದಾಗಿ ಹೇಳಿದಳು. ಒಂದು ಕ್ಷಣ ನಾನು ಹಿಂದೆ ಸರಿದೆ. ನಿನಗೇಕೆ ಈ ಆಲೋಚನೆ ಬಂತೆಂದು ಕೇಳಿದೆ ಮತ್ತು ನನಗೂ ತಿಳಿಸದೇ ಈ ನಿರ್ಧಾರಕ್ಕೆ ಏಕೆ ಬಂದೆ. ಇದೊಂದು ರೀತಿಯಲ್ಲಿ ವಿಚಿತ್ರವಾಗಿದೆ ಎಂದಕ್ಕೆ ನನಗೆ ಹೊಡೆದಳು ಎಂದು ಹೇಳಿದ್ದಾರೆ.
ಇಬ್ಬರ ನಡುವೆ ದೊಡ್ಡ ವಾಗ್ವಾದವೇ ನಡೆಯಿತು. ತನ್ನ ನಿರ್ಧಾರ ಬದಲಿಸುವವರೆಗೂ ಮದುವೆ ಮುಂದೂಡುವುದಾಗಿ ಹೇಳಿದೆ. ಆದರೆ, ಹೇಳಿದ್ದನ್ನು ಒಳ್ಳೆಯದಕ್ಕೆ ಎಂದು ಅರ್ಥ ಮಾಡಿಕೊಳ್ಳದೆ ಮತ್ತೆ ಸಹೋದರಿಯ ಮನೆಗೆ ತೆರಳಿದಳು ಎಂದು ಇಡೀ ಘಟನೆಯನ್ನು ಬರೆದು ರೆಡಿಟ್ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಅನೇಕರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ವ್ಯಕ್ತಿಗಳನ್ನು ಮದುವೆಯಾಗಬೇಡಿ ಎಂದು ನೆಟ್ಟಿಗನೋರ್ವ ಹೇಳಿದ್ದರೆ, ನಾವು ಒಟ್ಟಿಗೆ ಇರುವಾಗ ಇನ್ನೊಬ್ಬ ವ್ಯಕ್ತಿಯ ಹೆಸರನ್ನು ನಿಮ್ಮ ಮೇಲೆ ಹಚ್ಚೆ ಹಾಕಿಸಿಕೊಳ್ಳಬೇಡಿ' ಎಂಬುದು ನಂಬಲಾಗದಷ್ಟು ಸಮಂಜಸವಾಗಿದೆ ಎಂದಿದ್ದಾರೆ. ಟ್ಯಾಟೂ ಶಾಶ್ವತವಾಗಿ ಇರಬೇಕೆಂದು ಆಕೆ ಬಯಸಿದ್ದರೆ ಅದು ಖಂಡಿತ ತಪ್ಪು. ಅದರಿಂದ ಪ್ರಸ್ತುತ ನಿಶ್ಚಿತಾರ್ಥಕ್ಕೆ ಎಷ್ಟು ಪರಿಣಾಮ ಬೀರಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅನೇಕ ರೀತಿಯ ಸಲಹೆಗಳನ್ನು ನೆಟ್ಟಿಗರು ನೀಡಿದ್ದಾರೆ. (ಏಜೆನ್ಸೀಸ್)