ಇಳಕಲ್ಲ(ಗ್ರಾ): ನಗರದಲ್ಲಿ ಬೈಕ್ ಚಲಾಯಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂದು ಸೋಮವಾರ ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸರು ಬೈಕ್ ರ‌್ಯಾಲಿ ಮೂಲಕ ಜಾಗೃತಿ ಜಾಥಾ ನಡೆಸಿದರು.
ಶಹರ್ ಪೋಲಿಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಶಹಜಹಾನ್ ನಾಯಕ ಅಪರಾಧ ವಿಭಾಗದ ಪಿಎಸ್ ಐ ಶಾಂತಾ ಹಳ್ಳಿ ನೇತೃತ್ವದಲ್ಲಿ ಹಲವಾರು ಪೊಲೀಸರು ಮತ್ತು ಯುವಕರು ರ‌್ಯಾಲಿ ನಡೆಸಿದರು.
ಪೋಲಿಸ್ ಠಾಣೆಯಿಂದ ಆರಂಭಗೊಂಡ ರ‌್ಯಾಲಿ ಕಂಠಿ ವೃತ್ತ, ನಗರಸಭೆ, ಮಹಾಂತೇಶ ಚಿತ್ರಮಂದಿರ, 10ನೇ ನಂಬರ್ ಶಾಲೆ, ಪೊಲೀಸ್ ಬಯಲು, ಬನ್ನಿಕಟ್ಟಿ, ಅಂಬಾಭವಾನಿ ದೇವಸ್ಥಾನ, ಕೊಪ್ಪರದಪೇಟೆ ಬನಶಂಕರಿ ದೇವಾಲಯ, ಶ್ರೀರಾಮ ಮಂದಿರ, ತರಕಾರಿ ಮಾರುಕಟ್ಟೆ, ಬಸವನಗುಡಿ, ಗಾಂಧಿ ಚೌಕ, ಗ್ರಾಮ ಚಾವಡಿ, ಗುಬ್ಬಿ ಪೇಟೆಯ ಬನಶಂಕರಿ ದೇವಾಲಯ, ಗೊರಬಾಳ ನಾಕಾ, ವಾಲ್ಮೀಕಿ ದೇವಸ್ಥಾನ, ಸರ್ಕಾರಿ ಆಸ್ಪತ್ರೆ, ಅಲಂಪೂರಪೇಟೆ ಮಾರ್ಗವಾಗಿ ಮರಳಿ ಪೊಲೀಸ್ ಠಾಣೆಗೆ ಆಗಮಿಸಿತು.
ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುತ್ತಿದ್ದ ಬೈಕ್ ಸವಾರರಿಗೆ ಪೊಲೀಸರು ಗುಲಾಬಿ ನೀಡಿ ಅಭಿನಂದಿಸಿದರು.