ನ್ಯೂಸ್

ಮುಸ್ಲಿಮರು ಎಲ್ಲಾ ವಿವಾದಿತ ಧಾರ್ಮಿಕ ಸ್ಥಳಗಳನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು: ಆರ್​ಎಸ್​ಎಸ್​ ನಾಯಕ

ನವದೆಹಲಿ: ಮುಸ್ಲಿಂ ಮತ್ತು ಬೇರೆ ಧರ್ಮಕ್ಕೆ ಸೇರಿದವರು ಸ್ವಯಂಪ್ರೇರಣೆಯಿಂದ ವಿವಾದಿತ ಧಾರ್ಮಿಕ ಸ್ಥಳಗಳನ್ನು ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಬೇಕು ಎಂದು ಹಿರಿಯ ಆರ್‌ಎಸ್‌ಎಸ್ ನಾಯಕ ಇಂದ್ರೇಶ್ ಕುಮಾರ್ ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು "ಪ್ರತಿ ಮಸೀದಿಯಲ್ಲೂ ಶಿವಲಿಂಗವನ್ನು ಹುಡುಕುವ ಅಗತ್ಯವಿಲ್ಲ" ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ಭಾಗವತ್​ ಅವರು ಪ್ರತಿಬಾರಿ ನೀಡುವ ಹೇಳಿಕೆ ಸಂಘರ್ಷವನ್ನು ಕೊನೆಗೊಳಿಸುವ ಬಗ್ಗೆ ಮಾತನಾಡುತ್ತಾರೆಯೇ ಹೊರತು ಅವರ ಭಾಷಣದಲ್ಲಿ ಸಮಾಜವು ದ್ವೇಷ ಮತ್ತು ಹಿಂಸೆಯಿಂದ ಮುಕ್ತವಾಗಿ ಯೋಚಿಸುವುದನ್ನು ಪ್ರತಿಬಿಂಬಿಸುತ್ತದೆ. ಸನಾತನ ಅನುಯಾಯಿಗಳಿಗೆ ಸೇರಿದ ದೇವಸ್ಥಾನವನ್ನು ವಿದೇಶಿ ಆಕ್ರಮಣಕಾರರು ಅಕ್ರಮವಾಗಿ ಪ್ರವೇಶಿಸಿ ಕೆಡವಿದ್ದಾರೆ.

ಮೋಹನ್​ ಭಾಗವತ್​ ಅವರು ಹೇಳಿರುವ ಮಾತು ಸ್ಪಷ್ಟವಾಗಿದ್ದು, ಸತ್ಯ ನಮ್ಮ ಕಣ್ಣ ಮುಂದಿದ್ದು, ಶೋಧಿಸುವ ಅಗತ್ಯವಿಲ್ಲ ಎಂದಿದ್ದಾರೆ. ಆ ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗಿದ್ದು, ಮುಸ್ಲಿಮರು ಮತ್ತು ಇತರ ಧರ್ಮಗಳಿಗೆ ಸೇರಿದ ಜನರು ಮುಂದೆ ಬಂದು ವಿವಾದಿತ ಧಾರ್ಮಿಕ ಸ್ಥಳಗಳನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಿಂದ ದೇಶದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಸಂತಸದ ವಾತಾವರಣವಿದೆ. ರಾಮಮಂದಿರ ಎಲ್ಲರ ಪಾಲಿನ ರಾಷ್ಟ್ರೀಯ ಮಂದಿರವಾಗಿದ್ದು, ರಾಮ ಎಲ್ಲರಿಗೂ ಮತ್ತು ಎಲ್ಲರಲ್ಲೂ ಇದ್ದಾನೆ. ಭಾರತವು ಎಲ್ಲಾ ಧರ್ಮಗಳನ್ನು ಸ್ವೀಕರಿಸುವ ಮತ್ತು ಗೌರವಿಸುವ ರಾಷ್ಟ್ರವಾಗಿದೆ. ಆದ್ದರಿಂದ ರಾಮಮಂದಿರವನ್ನು ರಾಷ್ಟ್ರೀಯ ಮಂದಿರವೆಂದು ಕರೆಯುವುದು ಸೂಕ್ತ ಎಂದು ಆರ್‌ಎಸ್‌ಎಸ್ ನಾಯಕ ಇಂದ್ರೇಶ್ ಕುಮಾರ್ ಹೇಳಿದ್ದಾರೆ.