ನ್ಯೂಸ್

ಮುಸ್ಲಿಂ ಮೀಸಲಾತಿ ಸುತ್ತೋಲೆ; ಹಿಂಪಡೆಯಲು ಬಿಜೆಪಿ ಒತ್ತಾಯ

Bengaluru - Political - Shivananda Tagadur

ಬೆಂಗಳೂರು:
ರಾಜ್ಯದಲ್ಲಿ 27 ಮುಸ್ಲಿಂ ಸಮುದಾಯವನ್ನು ಒಬಿಸಿಗೆ ಸೇರಿಸಿ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೆ ವಾಪಸ್ ಪಡೆಯಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಈ ಸುತ್ತೋಲೆ ಮೂಲಕ ಹಿಂದೂ ಒಬಿಸಿ ಸಮುದಾಯಗಳ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದರು.
ಇಡಬ್ಲ್ಯುಎಸ್ ಅಡಿಯಲ್ಲಿ ಅವರಿಗೆ ಮೀಸಲಾತಿ ಇದೆ. ಹಿಂದೂ ಒಬಿಸಿಗಳಿಗೆ ಇರುವ ಶೇ.27 ಮೀಸಲಾತಿಗೆ ಇವರನ್ನು ಸೇರಿಸಿದರೆ ಅನ್ಯಾಯ ಆಗುತ್ತದೆ. ಇದೇ ತಪ್ಪು ಮಾಡಿದ ಪ್ರಕರಣದಲ್ಲಿ ಪಶ್ಚಿಮ ಬಂಗಾಲದ ಕಲ್ಕತ್ತ ಹೈಕೋರ್ಟ್ ತೀರ್ಪು ಕೊಟ್ಟಿದೆ. ರಾಜ್ಯದಲ್ಲಿ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಸಿದ್ದರಾಮಯ್ಯನವರು ಸಂವಿಧಾನವಿರೋಧಿ ಕೆಲಸ ಮಾಡಬಾರದು ಎಂದರು.
ಒಬಿಸಿ ಪಟ್ಟಿಯಲ್ಲಿ 108 ಸಮುದಾಯಗಳಿದ್ದವು. ಇದರಲ್ಲಿ ಮುಸ್ಲಿಮರ 2 ಸಮುದಾಯಗಳಿದ್ದವು. ವೃತ್ತಿ ಆಧಾರದಡಿ ಇವರನ್ನು ಸೇರಿಸಿದ್ದರು. ಮಿಲ್ಲರ್ ಕಮಿಷನ್‌ನಿಂದ ಇಲ್ಲಿನವರೆಗೆ ಮುಸ್ಲಿಮರನ್ನು ಒಬಿಸಿ ಅಡಿ ತರಲು ಸಾಧ್ಯ ಎಂದು ಹೇಳಿದ್ದರೂ ಕೂಡ 27 ಮುಸ್ಲಿಂ ಸಮುದಾಯದವರನ್ನು ಒಬಿಸಿಗೆ ಸೇರಿಸಿದ್ದಾರೆ ಎಂದು ಆಕ್ಷೇಪಿಸಿದರು.
ಧರ್ಮದ ಆಧಾರದಲ್ಲಿ ಯಾರಿಗೂ ಮೀಸಲಾತಿ ಕೊಡಬಾರದು ಎಂದು ಕೊಲ್ಕತ್ತ್ತ ಹೈಕೋರ್ಟ್ ತಿಳಿಸಿದೆ. ರಾಜ್ಯ ಸರ್ಕಾರ ಒಂದು ತಿಂಗಳ ಹಿಂದೆ ಒಬಿಸಿ ಮೀಸಲಾತಿ 2ಎ ಒಳಗಡೆ 27 ಮುಸ್ಲಿಂ ಸಮುದಾಯಗಳನ್ನು ಸೇರಿಸಿದ್ದು ತುಷ್ಟೀಕರಣದ ರಾಜಕಾರಣ ಎಂದರು.