ನವದೆಹಲಿ: ಜಮ್ಮುಕಾಶ್ಮೀರದ 87 ವರ್ಷದ ಮುಸ್ಲಿಂ ಮಹಿಳೆಯೋರ್ವರು ಹಜ್ ಯಾತ್ರೆಗಾಗಿ ಕೂಡಿಟ್ಟುಕೊಂಡಿದ್ದ 5 ಲಕ್ಷ ರೂಪಾಯಿಯನ್ನು ಕರೊನಾ ವೈರಸ್ ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾಗಿರುವ ಬಡವರು, ನಿರ್ಗತಿಕರ ಸಹಾಯಾರ್ಥ ನೀಡಿದ್ದಾರೆ.
ಕರೊನಾ ವೈರಸ್ ನಿಯಂತ್ರಣಕ್ಕಾಗಿ ಭಾರತವನ್ನು ಲಾಕ್ ಡೌನ್ ಮಾಡಿದ್ದರಿಂದ ಅದೆಷ್ಟೋ ಜನ ಬಡವರು, ಕೂಲಿ ಕಾರ್ಮಿಕರು, ದಿನಗೂಲಿ ಕೆಲಸಗಾರರು ಹೊಟ್ಟೆಗಿಲ್ಲದೆ ಸಂಕಷ್ಟಪಡುತ್ತಿದ್ದಾರೆ. ಜಮ್ಮುಕಾಶ್ಮೀರದಲ್ಲಿ ಇಂತಹ ಜನರ ಸಹಾಯಕ್ಕೆ ಆರ್ಎಸ್ಎಸ್ ಅಂಗಸಂಸ್ಥೆಯಾದ ಸೇವಾ ಭಾರತಿ ನಿಂತಿದೆ. ನಿರ್ಗತಿಕರಾದವರ ಹೊಟ್ಟೆ, ಬಟ್ಟೆ, ಆಶ್ರಯಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದೆ.
ಸೇವಾ ಭಾರತಿ ಸ್ವಯಂ ಸೇವಾ ಸಂಸ್ಥೆ ಬಡಜನರಿಗಾಗಿ ಸೇವೆ ಸಲ್ಲಿಸುತ್ತಿರುವುದನ್ನು ನೋಡಿ ಪ್ರಭಾವಿತರಾದ ಖಲೀದಾ ಬೇಗಂ ಎಂಬ ವೃದ್ಧ ಮಹಿಳೆ ತಾವು ಹಜ್ ಯಾತ್ರೆಗಾಗಿ ಕೂಡಿಟ್ಟಿದ್ದ 5 ಲಕ್ಷ ರೂಪಾಯಿಯನ್ನು ಸಂಸ್ಥೆಗೆ ದೇಣಿಗೆಯಾಗಿ ನೀಡಿದ್ದಾರೆ. ಕಷ್ಟದಲ್ಲಿರುವವರ ಅಗತ್ಯ ಪೂರೈಕೆಗಾಗಿ ಬಳಸಿಕೊಳ್ಳಿ ಎಂದು ಹೇಳಿದ್ದಾರೆ.
ಖಲೀದಾ ಬೇಗಂ ಪ್ರತಿವರ್ಷವೂ ಹಜ್ ಯಾತ್ರೆಗೆ ಹೋಗುತ್ತಿದ್ದರು. ಆದರೆ ಲಾಕ್ಡೌನ್ ಇರುವ ಕಾರಣ ಯಾತ್ರೆಯನ್ನು ಮುಂದೂಡಿದ್ದಾರೆ. ಅವರು ಮನಸು ಮಾಡಿದ್ದರೆ ಹಣವನ್ನು ಹಾಗೇ ಇಟ್ಟುಕೊಳ್ಳಬಹುದಿತ್ತು. ಆದರೆ ಹಾಗೆ ಮಾಡದೆ ಕರೊನಾ ಲಾಕ್ಡೌನ್ ಸಂತ್ರಸ್ತರ ಸೇವೆಗಾಗಿ ಸೇವಾಭಾರತಿಗೆ ನೀಡಿದ್ದಾರೆ.
ಖಲೀದಾ ಬೇಗಂ ಸೇವಾ ಭಾರತಿಗೆ ಹಣ ನೀಡಿದ ಬಗ್ಗೆ ಆರ್ಎಸ್ಎಸ್ನ ಮಾಧ್ಯಮ ವಿಭಾಗ ಇಂದ್ರಪ್ರಸ್ಥ ವಿಶ್ವ ಸಂವಾದ ಕೇಂದ್ರದ ಮುಖ್ಯಸ್ಥ ಅರುಣ್ ಆನಂದ್ ತಿಳಿಸಿದ್ದಾರೆ.
ಖಲೀದಾ ಬೇಗಂ ಜೀ ಅವರು ಜಮ್ಮುಕಾಶ್ಮೀರದಲ್ಲಿ ಕಾನ್ವೆಂಟ್ನಲ್ಲಿ ಶಿಕ್ಷಣ ಪಡೆದ ಕೆಲವೇ ಮಹಿಳೆಯರಲ್ಲಿ ಒಬ್ಬರು.1951ರಲ್ಲಿ ಆರ್ಎಸ್ಎಸ್ನ ರಾಜಕೀಯ ಅಂಗವಾಗಿ ಸ್ಥಾಪನೆಗೊಂಡ ಭಾರತೀಯ ಜನಸಂಘದ ಜಮ್ಮು-ಕಾಶ್ಮೀರದ ಮೊದಲ ಅಧ್ಯಕ್ಷರಾಗಿದ್ದ ಕರ್ನಲ್ ಪೀರ್ ಮೊಹಮ್ಮದ್ ಖಾನ್ ಅವರ ಸೊಸೆ. ಖಲೀದಾ ಬೇಗಂ ಅವರ ಪುತ್ರ, ನಿವೃತ್ತ ಐಎಎಸ್ ಅಧಿಕಾರಿ ಫಾರೂಖ್ ಖಾನ್ ಅವರು ಸದ್ಯ ಜಮ್ಮು ಕಾಶ್ಮೀರದ ಲೆಫ್ಟಿನಂಟ್ ಗವರ್ನರ್ರ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅರುಣ್ ಮಾಹಿತಿ ನೀಡಿದ್ದಾರೆ.
87 ವರ್ಷವಾದರೂ ಖಲೀದಾ ಬೇಗಂ ಜಮ್ಮುಕಾಶ್ಮೀರದಲ್ಲಿ ಮಹಿಳೆಯರ ರಕ್ಷಣೆ, ಸುಧಾರಣೆ, ದೀನದಲಿತರ ಕಲ್ಯಾಣ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಲಾಕ್ಡೌನ್ ಘೋಷಣೆಯಾದಾಗಿನಿಂದಲೂ ಆರ್ಎಸ್ಎಸ್, ಸೇವಾ ಭಾರತಿಯ ಸ್ವಯಂ ಸೇವಕರು ದೇಶಾದ್ಯಂತ ಬಡಜನರಿಗೆ ಆಹಾರ ಮತ್ತಿತರ ಅಗತ್ಯ ವಸ್ತುಗಳನ್ನು ನೀಡುತ್ತಿದ್ದಾರೆ. ದೆಹಲಿಯ ಆನಂದ್ ವಿಹಾರ್ ಬಸ್ಸ್ಟ್ಯಾಂಡ್ನಲ್ಲಿ ಅಪಾರವಾಗಿ ಗುಂಪುಗೂಡಿದ್ದ ವಲಸೆ ಕಾರ್ಮಿಕರಿಗೆ ಊಟ ನೀಡಿದ್ದಾರೆ. ಅಲ್ಲದೆ, ಅವರಿಗೆ ಧೈರ್ಯವನ್ನೂ ತುಂಬಿದ್ದಾರೆ. (ಏಜೆನ್ಸೀಸ್)