Ramzan| ರಂಜಾನ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಮರು ಉಪವಾಸ ಮಾಡುವ ಪದ್ಧತಿಯನ್ನು ಹಿಂದಿನಿಂದಲೂ ಸಹ ಆಚರಿಸಿಕೊಂಡು ಬರುತ್ತಿದ್ದಾರೆ. ಜನರು ಉದ್ದೇಶಪೂರ್ವಕವಾಗಿ ಉಪವಾಸವನ್ನು ಬಿಟ್ಟುಬಿಡುವುದು ಅಥವಾ ಅದರಿಂದ ತಪ್ಪಿಸಿಕೊಳ್ಳುವುದು ಸಾಮಾನ್ಯ. ಆದರೂ ಉಪವಾಸಕ್ಕಾಗಿ ಇಸ್ಲಾಂನಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಒಬ್ಬ ವ್ಯಕ್ತಿಗೆ ಉಪವಾಸವನ್ನು ತಪ್ಪಿಸಲು ಸರಿಯಾದ ಕಾರಣವಿದ್ದರೆ ಮಾತ್ರ ಉಪವಾಸ ತಪ್ಪಿಸಲು ಅವಕಾಶ ನೀಡಲಾಗಿದೆ. ಆದಾಗ್ಯೂ ಒಬ್ಬ ವ್ಯಕ್ತಿ ಉಪವಾಸ ಕೈ ಬಿಡಲು ಅರ್ಹರೆಂದು ಪರಿಗಣಿಸಲು ಕೆಲವು ಅಂಶಗಳಿವೆ.
ಉದಾಹರಣೆಗೆ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ, ಗರ್ಭಿಣಿಯಾದರೆ, ಮುಟ್ಟಾಗಲು ಪ್ರಾರಂಭಿಸಿದರೆ ಅಥವಾ ರಂಜಾನ್ ಸಮಯದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು ಪ್ರಾರಂಭಿಸಿದರೆ, ಅವರು ಉಪವಾಸವನ್ನು ಬಿಟ್ಟು ನಂತರದ ದಿನಾಂಕದಂದು ಅದನ್ನು ಸರಿದೂಗಿಸಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ದೀರ್ಘಕಾಲದ ಕಾಯಿಲೆಗಳು ಅಥವಾ ವೃದ್ಧಾಪ್ಯದಂತಹ ಉಪವಾಸ ಮಾಡಲು ಸಾಧ್ಯವಾಗದ ಪರಿಸ್ಥಿತಿಗಳನ್ನು ಹೊಂದಿರುವ ವ್ಯಕ್ತಿಗಳು ಉಪವಾಸವನ್ನು ಕೈ ಬಿಡುತ್ತಾರೆ.
ಉಪವಾಸದ ಸಮಯದಲ್ಲಿ ಒಬ್ಬ ವ್ಯಕ್ತಿಯು ತಿನ್ನಬಹುದಾದ ವಸ್ತುವನ್ನು ಉದ್ದೇಶಪೂರ್ವಕವಾಗಿ ಸೇವಿಸದಿದ್ದರೆ ಉಪವಾಸವು ಬಲವಾಗಿರುತ್ತದೆ ಮತ್ತು ಆ ವ್ಯಕ್ತಿಗೆ ಅಂದುಕೊಂಡ ಕಾರ್ಯಕ್ಕೆ ಪ್ರತಿಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ. ಆದಾಗ್ಯೂ ಸೂಕ್ತ ಕಾರಣವಿಲ್ಲದೆ ಉದ್ದೇಶಪೂರ್ವಕವಾಗಿ ಉಪವಾಸವನ್ನು ಬಿಟ್ಟುಬಿಟ್ಟರೆ ನೀವು 60 ದಿನಗಳ ನಿರಂತರ ಉಪವಾಸವನ್ನು ಮಾಡಬೇಕಾಗಿರುತ್ತದೆ. ಅದೂ ಸಾಧ್ಯವಾಗದಿದ್ದರೆ ಅವನು ಅರವತ್ತು ಜನ ಬಡವರಿಗೆ ಊಟ ಹಾಕಬೇಕು ಎನ್ನುವ ಸಂಪ್ರದಾಯವಿದೆ.
ರಂಜಾನ್‌ನಲ್ಲಿ ತಪ್ಪಿದ ದಿನಗಳನ್ನು ಭರ್ತಿ ಮಾಡುವುದು ಕಡ್ಡಾಯವಾಗಿದೆ. ಉಪವಾಸ ಮಾಡುವಷ್ಟು ವಯಸ್ಸಿನವರಾಗಿದ್ದರೂ ಕೂಡ ಉಪವಾಸ ಮಾಡದಿದ್ದರೆ, ಅಥವಾ ರಂಜಾನ್‌ನಲ್ಲಿ ಒಂದು ಅಥವಾ ಹೆಚ್ಚಿನ ಉಪವಾಸದ ದಿನಗಳಿಂದ ತಪ್ಪಿಸಿಕೊಂಡರೆ, ರಂಜಾನ್ ಮುಗಿದ ನಂತರ ತಪ್ಪಿದ ದಿನಗಳನ್ನು ಪೂರ್ಣಗೊಳಿಸಬೇಕು. ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಈದ್‌ನ ಎರಡು ದಿನಗಳನ್ನು ಹೊರತುಪಡಿಸಿ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಯಾವುದೇ ದಿನದಲ್ಲಿ ಉಪವಾಸ ಮಾಡಬಹುದು.
ಈದ್-ಉಲ್-ಫಿತರ್ ಮತ್ತು ಈದ್-ಉಲ್-ಅಧಾದಂದು ಮುಸ್ಲಿಮರು ಉಪವಾಸ ಮಾಡಲು ಅನುಮತಿ ಇಲ್ಲ ಎಂದು ಹೇಳಲಾಗಿದೆ. ತಪ್ಪಿದ ಉಪವಾಸ ದಿನಗಳನ್ನು ಸರಿಪಡಿಸುವ ಸೂಚನೆಗಳು ತುಂಬಾ ಸರಳವಾಗಿದೆ. ಒಬ್ಬರು ಮಾಡಬೇಕಾಗಿರುವುದು ಅವರು ತಪ್ಪಿಸಿಕೊಂಡ ಒಂದು ಉಪವಾಸದ ಪ್ರತಿಯಾಗಿ ಒಂದು ಉಪವಾಸವನ್ನು ಮಾತ್ರ ಮಾಡಬೇಕಾಗಿರುತ್ತದೆ. ಆದ್ದರಿಂದ, ನೀವು ಮೂರು ಉಪವಾಸಗಳನ್ನು ತಪ್ಪಿಸಿಕೊಂಡಿದ್ದರೆ, ನೀವು ಇನ್ನೂ ಮೂರು ದಿನ ಉಪವಾಸ ಮಾಡಬೇಕು. ಈ ದಿನಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಗೊತ್ತುಪಡಿಸಬೇಕು.
ರಂಜಾನ್ ನಂತರ ಬರುವ ತಿಂಗಳು ಶವ್ವಾಲ್, ಇದು ಇಸ್ಲಾಮಿಕ್ ಚಂದ್ರನ ಕ್ಯಾಲೆಂಡರ್ ಪ್ರಕಾರ 10 ನೇ ಇಸ್ಲಾಮಿಕ್ ತಿಂಗಳು. ತಪ್ಪಿದ ಉಪವಾಸಗಳನ್ನು ಸರಿದೂಗಿಸಲು ಇದು ಉತ್ತಮ ತಿಂಗಳಾಗಿದ್ದು, ರಂಜಾನ್ ನಂತರ ದೇಹವು ಇನ್ನೂ ಉಪವಾಸದ ಮನಸ್ಥಿತಿಯಲ್ಲಿರುವಾಗ ಮತ್ತು ಕೆಲವು ಹೆಚ್ಚುವರಿ ದಿನಗಳ ಉಪವಾಸವನ್ನು ಸುಲಭವಾಗಿ ನಿಭಾಯಿಸಲು ಇದು ಸೂಕ್ತವಾದ ತಿಂಗಳಾಗಿದೆ.