ಬಾಗಲಕೋಟೆ ಚರಂತಿಮಠದ ಶಿವಾನುಭವ ಮಂಟಪದಲ್ಲಿ ನಡೆದಿರುವ ಪಂಚಾಕ್ಷರಿ ಗವಾಯಿಗಳ ಪುರಾಣ-ಪ್ರವಚನದಲ್ಲಿ ಶನಿವಾರ ಧಾರವಾಡದ ಕಿರಾಣಾ ಘರಾಣೆಯ ಖ್ಯಾತ ಗಾಯಕ ಪಂ. ಕೈವಲ್ಯಕುಮಾರ್ ಗುರವ್ ತಂಡದವರು ಸ್ವರ ನಿನಾದ ಕಾರ್ಯಕ್ರಮ ನಡೆಸಿದರು.
ಬಾಗಲಕೋಟೆ: ಭಾರತವು ಅನೇಕ ವೈವಿಧ್ಯಮಯ ಆಚರಣೆಗಳು ಹಾಗೂ ಸಂಪ್ರದಾಯಗಳಿAದ ಜಗತ್ಪ್ರಸಿದ್ಧವಾಗಿದೆ. ಸಂಗೀತವು ಭಾರತೀಯ ಸಂಸ್ಕೃತಿಯ ಬೇರು ಆಗಿದ್ದು, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಜೀವಂತವಾಗಿರಿಸುವ ಶಕ್ತಿಯನ್ನು ಹೊಂದಿದೆ ಎಂದು ಚರಂತಿಮಠದ ಡಾ.ಪ್ರಭು ಸ್ವಾಮಿಗಳು ಹೇಳಿದರು.
ನಗರದ ಕಣವಿ ವೀರಭದ್ರೇಶ್ವರ ಟ್ರಸ್ಟ್ ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಚರಂತಿಮಠದ ಶಿವಾನುಭಾವ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಉಭಯಗಾಯನ ವಿಶಾರದ ಗಾನಯೋಗಿ ಪಂ. ಪಂಚಾಕ್ಷರ ಗವಾಯಿಗಳ ಪುರಾಣ ಪ್ರವಚನದ ಸಂದರ್ಭದಲ್ಲಿ ನಡೆದ ಶ್ರಾವಣ ಸ್ವರ ನಿನಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದವರು.
ಹಿಂದಿನ ಕಾಲದಲ್ಲಿ ನಾಟಕಗಳಲ್ಲಿಯೂ ಸಂಗೀತಕ್ಕೆ ವಿಶೇಷ ಸ್ಥಾನವಿತ್ತು. ಭಾರತೀಯ ಸಂಸ್ಕೃತಿಯೇ ಅಂತಹದ್ದಾಗಿದೆ. ಪುರಾಣದೊಂದಿಗೆ ಸಂಗೀತವನ್ನು ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಮನೋಲ್ಲಾಸ ದೊರೆಯುತ್ತದೆ. ಪಂ. ಪಂಚಾಕ್ಷರ ಗವಾಯಿಗಳು ಸಂಗೀತ ಲೋಕಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಗದಗಿನ ಪುಣ್ಯಾಶ್ರಮ ಮಠವು ನಾಡಿಗೆ ಅನೇಕ ಪ್ರತಿಭಾವಂತ ಗಾಯಕರನ್ನು, ತಬಲಾ ಹಾಗೂ ತಂಬೂರಿ ವಾದಕರನ್ನು ನೀಡಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ಸಂಗೀತವು ಚಿಕಿತ್ಸೆಯಂತೆ. ಮನಸ್ಸನ್ನು ಸದಾ ಶಾಂತವಾಗಿರಿಸಿಕೊಳ್ಳಲು ಸಂಗೀತವನ್ನು ಆಲಿಸಬೇಕು. ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ ಪರಂಪರೆಗಳು ಭಾರತದ ಮುಕುಟವಿದ್ದಂತೆ ಎಂದು ಹೇಳಿದರು.
ಧಾರವಾಡದ ಕಿರಾಣಾ ಘರಾಣೆಯ ಖ್ಯಾತ ಗಾಯಕ ಪಂ. ಕೈವಲ್ಯಕುಮಾರ್ ಗುರವ್ ಅವರು ಪೂರಿಯಾ ಕಲ್ಯಾಣ ರಾಗದೊಂದಿಗೆ ತರಾನಾ ಪ್ರಸ್ತುತಪಡಿಸಿ ಸಂಗೀತ ರಸಿಕರನ್ನು ಮಂತ್ರಮುಗ್ಧಗೊಳಿಸಿದರು. ಬಸವಣ್ಣನವರ ಭಕ್ತಿಯಿಲ್ಲದಾ ಬಡವನಾನಯ್ಯ, ನಾದಪ್ರಿಯ ಶಿವನೆಂಬರು ವಚನಗಳು, ಆಡಕ್ಕೋಗೋಣ ಬಾರೋ ರಂಗ, ದೇವ ಬಂದನೋ, ಸ್ವಾಮಿ ಬಂದಾನೋ ದಾಸರ ಪದ ಹಾಗೂ ಅಕ್ಕಮಹಾದೇವಿಯವರ *ಅಕ್ಕ ಕೇಳವ್ವ, ನಾನೊಂದು ಕನಸು ಕಂಡೆ, ಸಜ್ಜನಳಾಗಿ ಮಜ್ಜನಕೆರೆವೆ ಸೇರಿದಂತೆ ವಿವಿಧ ವಚನ, ದಾಸರ ಪದ ಹಾಗೂ ಭಕ್ತಿಗೀತೆಗಳನ್ನು ಮನೋಜ್ಞವಾಗಿ ಪ್ರಸ್ತುತಪಡಿಸಿ ಕೇಳುಗರಿಗೆ ಸಂಗೀತ ರಸದೌತಣ ಉಣಬಡಿಸಿದರು.
ಬೀಳಗಿ-ಹಲಗಲಿಯ ಗುರುಪಾದ ಶಿವಾಚಾರ್ಯ ಸ್ವಾಮಿಗಳು, ಬಾಗಲಕೋಟೆಯ ಟೀಕಿನಮಠದ ಮಲ್ಲಿಕಾರ್ಜುನ ಸ್ವಾಮಿಗಳು, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ್ ಅಥಣಿ, ಅಶೋಕ ಸಜ್ಜನ, ಜಿ.ಎನ್. ಪಾಟೀಲ, ಪ್ರಕಾಶ ರೇವಡಿಗಾರ ಇತರರು ಇದ್ದರು.