| ರಾಜಶೇಖರ ಜೋಗಿನ್ಮನೆ, ಸಹಾಯಕ ಸಂಪಾದಕ, ವಿಜಯವಾಣಿ
ಪಂ. ಪರಮೇಶ್ವರ ಹೆಗಡೆ -70: ನಾಡಿನ ಸುಪ್ರಸಿದ್ಧ ಹಿಂದೂಸ್ತಾನಿ ಗಾಯಕ ಪಂಡಿತ್ ಪರಮೇಶ್ವರ ಹೆಗಡೆ ಅವರ ಗಾಯನವೆಂದರೆ ಬಾಗುತ್ತ, ಬಳುಕುತ್ತ, ಅತ್ತಲೂ ಇತ್ತಲೂ ಸುತ್ತಲೂ ಸೌಂದರ್ಯವನ್ನು ಚೆಲ್ಲುತ್ತ, ಎಲ್ಲಿಯೂ ನಿಲ್ಲದೆ, ಯಾರಿಗೂ ಬೇಸರ ಮಾಡದೆ, ನಿರಂತರ ಚಲನಶೀಲವಾಗಿ ಹರಿಯುವ ತಿಳಿನೀರ ನದಿಯ ಹಾಗೆ. ಮಧುರವಾದ ನಾದಸಂಚಾರದ ಮೂಲಕ ರಾಗದಾಳದ ಸೌಂದರ್ಯವನ್ನು ಹುಡುಕುವ ತನ್ಮಯತೆ ಇವರ ಗಾಯನದ ವಿಶೇಷ.
ಕಿರಾಣ, ಗ್ವಾಲಿಯರ್ ಮತ್ತು ಪಟಿಯಾಲಾ ಘರಾಣೆಗಳ ಸಂಗಮವಾದ ರಾಜಗುರು ಸಂಗೀತದ ಸೌಂದರ್ಯವನ್ನು ಹೆಗಡೆಯವರ ಗಾಯನದಲ್ಲಿಯೂ ಆಸ್ವಾದಿಸಬಹುದು. ಮೂರು ಸಪ್ತಕಗಳಲ್ಲೂ ಲೀಲಾಜಾಲವಾಗಿ ಸಂಚರಿಸಬಲ್ಲ ಗಂಭೀರ ಧ್ವನಿ, ಸ್ವರ ಶುದ್ಧತೆ, ಸ್ಪಷ್ಟ ಉಚ್ಚಾರಣೆ ಮತ್ತು ಲಯಕಾರಿಯ ಮೇಲಿನ ಅಸಾಧಾರಣ ಹಿಡಿತ, ಶಕ್ತಿಯುತ ತಾನ್‌ಗಳು ಇವರ ಗಾಯನಕ್ಕೆ ಮೆರುಗು ನೀಡುತ್ತವೆ. ಗ್ವಾಲಿಯರ್ ಘರಾಣೆಯ ವೈಶಿಷ್ಟ್ಯವಾದ ಸ್ವರ ಮತ್ತು ಲಯದ ಸಮ್ಮಿಲನವನ್ನು ಇವರ ಸಂಗೀತದಲ್ಲಿ ಕಾಣಬಹುದು. ಅವರು ಹೊರಹೊಮ್ಮಿಸುವ ಆಲಾಪಕ್ಕೆ ಭಾವನೆಗಳ ಸ್ಪರ್ಶವಿದೆ. ಹಾಡುತ್ತಿರುವ ಪ್ರತಿಕ್ಷಣವನ್ನೂ ತಾಜಾತನದಿಂದ ಅಲಂಕರಿಸುವ ಕೌಶಲವಿದೆ.
ಯಾವುದೇ ರಾಗ ಅವರ ಪ್ರಸ್ತುತಿಯಲ್ಲಿ ಏಕತಾನತೆಗೆ ಅಂಟಿಕೊಳ್ಳುವುದಿಲ್ಲ. ನವೋಲ್ಲಾಸದಿಂದ ಕೇಳುಗನ ಹೃದಯವನ್ನು ಮೀಟುತ್ತದೆ. ಇಂಥ ಪರಮೇಶ್ವರ ಹೆಗಡೆ ಅವರೊಡನೆ ಮಾತನಾಡತೊಡಗಿದರೆ ಹೊತ್ತು ಸದ್ದಿಲ್ಲದೆ ಸರಿದು ಹೋಗುತ್ತಿರುತ್ತದೆ.
ಏಕೆಂದರೆ ಅಲ್ಲಿ ಸುಮಾರು 62 ವರ್ಷಗಳ ನಾದಸಾಂಗತ್ಯದ ಕಥನಗಳು ಬಿಚ್ಚಿಕೊಳ್ಳುತ್ತವೆ. ಸಾಗಿ ಬಂದ ಹಾದಿಯ ನೆನಪುಗಳು ಅನಾವರಣಗೊಳ್ಳುತ್ತ ಹೋಗುತ್ತವೆ. ಅವರಿಗೀಗ ಎಪ್ಪತ್ತು ವರ್ಷ. ಈ ಸುದೀರ್ಘ ಪಯಣದ ನಂತರವೂ ಅವರು ತಾನು ಸಂಗೀತಗಾರ ಎಂದುಕೊಳ್ಳುವುದಿಲ್ಲ. ನಾನಿನ್ನೂ ವಿದ್ಯಾರ್ಥಿ ಎಂಬ ವಿನಯ ಅವರದು. "ಸಂಗೀತವೆನ್ನುವುದು ಕಲಿತು ಮುಗಿಯದ ವಿದ್ಯೆ, ನಮ್ಮ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪಡೆದುಕೊಳ್ಳುತ್ತ ಹೋಗಬೇಕಷ್ಟೆ'. ಎನ್ನುವ ಅವರಿಗೆ ಸಂಗೀತ ಎಲ್ಲವನ್ನೂ ಕೊಟ್ಟಿದೆ ಎಂಬ ತೃಪ್ತಿಯಿದೆ. ಆದರೆ ಪ್ರತಿ ಕಛೇರಿ ಮುಗಿದಾಗಲೂ ಇನ್ನಷ್ಟು ಚೆನ್ನಾಗಿ ಹಾಡಬಹುದಿತ್ತು ಎಂಬ ಅತೃಪ್ತಿ ಅವರನ್ನು ಕಾಡುತ್ತದೆಯಂತೆ. ವಿದ್ಯೆ ವಿನಯದಲ್ಲಿ ಶೋಭಿಸುವುದು ಅಂದರೆ ಇದೇ ಅಲ್ಲವೇ? ಅವರ ಗುರುವೂ ಹಾಗೇ ಇದ್ದರು. ಹೆಗಡೆಯವರು ನೆನಪಿನ ಕಣಜದಿಂದ ಒಂದೆರಡು ಅಂಥ ಮುತ್ತು ಹೆಕ್ಕಿ ಕೊಟ್ಟರು...
ಬಿ.ಕಾಂ ರಗಡ್ ಮಂದಿ ಮಾಡ್ತಾರ...
‘ಒಮ್ಮೆ ದೆಹಲಿಯಲ್ಲಿ ಪಂಡಿತ್ ಬಸವರಾಜ ರಾಜಗುರು ಅವರ ಸಂಗೀತ ಕಛೇರಿ ಇತ್ತು. ನನ್ನನ್ನೂ ಅವರೊಂದಿಗೆ ಕರೆದುಕೊಂಡು ಹೋಗಿದ್ದರು. ಸಂಜೆ ಕಛೇರಿ ಮುಗಿಯಿತು. ರೂಂಗೆ ಬಂದೆವು. ಆಗ ಅವರು ಬಸ್ ಟಿಕೆಟ್ ಒಂದನ್ನು ತಂದು ಕೊಟ್ಟರು. ಅದು ದೆಹಲಿ ದರ್ಶನ ಮಾಡಿಸುವ ಬಸ್‌ನ ಮರುದಿನದ ಟಿಕೆಟ್ ಆಗಿತ್ತು. ‘ನಾಳೆ ನೀನು ಇಡೀ ಡೆಲ್ಲಿ ನೋಡ್ಕೊಂಡು ಬರ್ಬೇಕು’ ತಗೊ ಅಂದ್ರು. ನನಗೆ ಮರುದಿನವೇ ಪರೀಕ್ಷೆ ಇತ್ತು. ನಾಳೆ ನನಗೆ ಬಿ.ಕಾಂ.ಪರೀಕ್ಷೆ ಇದೆ, ಧಾರವಾಡಕ್ಕೆ ಹೋಗಬೇಕು ಅಂದೆ. ‘ಬಿ.ಕಾಂ ರಗಡ್ ಮಂದಿ ಮಾಡ್ತಾರ, ಸಂಗೀತ ಕಲಿಯೋರು ಕಡಿಮೆ, ನೀನು ಡೆಲ್ಲಿ ಸುತ್ತಿ ನೋಡಿಕೊಂಡೇ ಹೋಗಬೇಕು’ ಅಂದ್ರು. ಅವರಿಗೆ ನನ್ನ ಮೇಲೆ ಅಷ್ಟು ಅಭಿಮಾನ, ಪ್ರೀತಿ ಇತ್ತು ’ ಎಂದು ಹೇಳುತ್ತಲೇ ಅವರಿಗೆ, ರಾಜಗುರು, ಪುರಾಣಿಕಮಠ ಅವರ ಹೃದಯ ವೈಶಾಲ್ಯದ ಸಂದರ್ಭ ನೆನಪಾದವು.
ಅದು ಗುರು-ಶಿಷ್ಯ ಪರಂಪರೆ ಇನ್ನೂ ಹಸಿರಾಗಿದ್ದ ಕಾಲ. ಗುರು ಶಿಷ್ಯನ ಪಾಲಿಗೆ ದೇವರು. ಗುರುವಿಗೆ ಶಿಷ್ಯನೆಂದರೆ ಅಪಾರ ವಾತ್ಸಲ್ಯ. ಎಲ್ಲ ಗುರುಶಿಷ್ಯರಿಗೂ ಇದು ಸಿಕ್ಕಿದೆ ಎನ್ನಲಾಗದಿದ್ದರೂ ಬಹುಶಃ ಪರಮೇಶ್ವರ ಅವರು ಅಂಥ ಅವಕಾಶ ಪಡೆದ ಭಾಗ್ಯವಂತರು. ಒಂದು ಕಾಲದಲ್ಲಿ ಯಕ್ಷಗಾನ ಕಲಾವಿದರೇ ಇಲ್ಲದ ಗ್ರಾಮವಿಲ್ಲ ಎಂಬಂತಿದ್ದ ಉತ್ತರಕನ್ನಡವೆಂಬ ಸಾಂಸ್ಕೃತಿಕ ನೆಲದ ಕಲಬಾಗ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದವರು ಪರಮೇಶ್ವರ ಹೆಗಡೆ. ತಂದೆ ಗೋವಿಂದ ಹೆಗಡೆ ಮತ್ತು ತಾಯಿ ಗಣಪಮ್ಮ. ಗೋವಿಂದ ಹೆಗಡೆ ಸ್ವತಃ ರಂಗಭೂಮಿ ಕಲಾವಿದ, ಸಂಗೀತಗಾರ. ಆದ್ದರಿಂದ ಸಹಜವಾಗಿ ಪರಮೇಶ್ವರ ಅವರಿಗೆ ಬಾಲ್ಯದಲ್ಲೇ ಸಂಗೀತದತ್ತ ಸೆಳೆತ ಶುರುವಾಯಿತು. ಇದನ್ನು ತಂದೆಯೂ ಗುರುತಿಸಿದರೆನಿಸುತ್ತದೆ. ಎಂಟನೇ ವಯಸ್ಸಿನಲ್ಲೇ ಹಿಂದೂಸ್ತಾನಿ ಸಂಗೀತ ಕಲಿಕೆಯ ದೀಕ್ಷೆಯಾಯಿತು. ಅದರ ಕುರಿತು ಪರಮೇಶ್ವರ ಹೆಗಡೆ ಅವರ ಮಾತುಗಳಲ್ಲೇ ಹೇಳುವುದಾದರೆ, ‘ನನಗಾಗ ಎಂಟು ವರ್ಷ. ನನಗೆ ಸಂಗೀತ ಕಲಿಸಬೇಕು ಎಂಬ ಆಸೆ ಅಪ್ಪನಿಗಿತ್ತು. ಹೀಗಾಗಿ ಹೊನ್ನಾವರದ ನಮ್ಮ ಮನೆಗೆ ಸಂಗೀತ ಗುರು ಪಂಡಿತ್ ಎಸ್.ಎಂ. ಭಟ್ ಕಟ್ಟಿಗೆ ಅವರನ್ನು ಗೋಕರ್ಣದಿಂದ ಕರೆಸಿಕೊಂಡು ನನ್ನನ್ನು ಸಂಗೀತಾಭ್ಯಾಸಕ್ಕೆ ಹಚ್ಚಿದರು. ಅವರು ನನ್ನ ಸಂಗೀತ ಪಯಣಕ್ಕೆ ಭದ್ರ ಬುನಾದಿ ಹಾಕಿದರು.
ಮುಂದೆ ಪಂಡಿತ್ ಚಂದ್ರಶೇಖರ ಪುರಾಣಿಕಮಠ ಅವರ ಬಳಿ ಕಲಿಯಲಾರಂಭಿಸಿದೆ. ಅವರು ತಬಲಾ, ಹಾರ್ಮೋನಿಯಂ ಸಾಥಿಯೊಂದಿಗೇ ಸಂಗೀತಾಭ್ಯಾಸ ಮಾಡಿಸುತ್ತಿದ್ದರು. ನಮ್ಮೂರಿನಲ್ಲಿ ಆಗ ಶಾಸ್ತ್ರೀಯ ಸಂಗೀತದ ಬಗ್ಗೆ ತಿಳಿವಳಿಕೆ ಕಡಿಮೆ ಇತ್ತು. ನಾನು ತಂಬೂರಿ ಹಿಡಿದುಕೊಂಡು ಅಭ್ಯಾಸ ಮಾಡಲಾರಂಭಿಸಿದರೆ ಜನ ‘ಭೀಮನ ಗದೆ ಹಿಡ್ಕೊಂಡು ಹಾಡ್ತಾನೆ’ ಅಂತ ತಮಾಷೆ ಮಾಡುತ್ತಿದ್ದರು. ಮುಂದೆ ನಾನು ಧಾರವಾಡಕ್ಕೆ ಬಿ.ಕಾಂ ಪದವಿಗಾಗಿ ಹೋಗಬೇಕಾಯಿತು. ಈ ಮಧ್ಯೆ ಪುರಾಣಿಕಮಠ ಅವರಿಗೆ ಧಾರವಾಡ ಆಕಾಶವಾಣಿಯಲ್ಲಿ ನಿಲಯ ಕಲಾವಿದರಾಗಿ ಕೆಲಸ ಸಿಕ್ಕಿತು. ಅದರಿಂದಾಗಿ ನನ್ನ ಸಂಗೀತ ಕಲಿಕೆ ಮುಂದುವರಿಯಿತು. ಪುರಾಣಿಕ ಮಠ ಅವರ ಮನೆಗೇ ಹೋಗಿ ಕಲಿಯುತ್ತಿದ್ದೆ.’
ಪುರಾಣಿಕಮಠರಂಥ ಗುರುಗಳಿರುವಾಗ ರಾಜಗುರುಗಳತ್ತ ಇವರೇಕೆ ಹೋದರು? ಎನ್ನುವುದೂ ಸ್ವಾರಸ್ಯಕರ ಸಂಗತಿ. ಅದುಕೂಡ ಶಿಷ್ಯ ವಾತ್ಸಲ್ಯದ ಮತ್ತೊಂದು ನಿದರ್ಶನವೇ.
ಧಾರವಾಡದಲ್ಲಿದ್ದಾಗ ಒಮ್ಮೆ ಪುರಾಣಿಕಮಠರು ಹಿಂದೂಸ್ತಾನಿ ಸಂಗೀತ ದಿಗ್ಗಜ ಪಂಡಿತ ಬಸವರಾಜ ರಾಜಗುರು ಅವರನ್ನು ಪರಿಚಯಿಸಿದರು. ಅವರಿಬ್ಬರಲ್ಲಿ ಸಲಿಗೆ ಇತ್ತು. ರಾಜಗುರು ಅವರು ಆಕಾಶವಾಣಿಗೆ ಬಂದಿದ್ದಾಗ ‘ಈ ಹುಡುಗ ಅಗ್ದಿ ಚೊಲೊ ಹಾಡ್ತಾನ, ಇವ್ನಿಗೆ ಇನ್ಮುಂದೆ ನೀವು ಕಲಿಸ್ರಿ’ ಎಂದರು. ತನ್ನ ಪ್ರತಿಭಾವಂತ ಶಿಷ್ಯ ಇನ್ನಷ್ಟು ಬೆಳೆಯಬೇಕು ಎಂದು ತಾವೇ ಮತ್ತೊಬ್ಬ ಗುರುವಿಗೆ ಒಪ್ಪಿಸುವ ಮೂಲಕ ಪುರಾಣಿಕಮಠರು ಸ್ವತಃ ಮಹಾಗುರುವೆನಿಸಿದ ಸಂದರ್ಭವದು. ಪುರಾಣಿಕಮಠರಿಂದ ಎಲ್ಲ ವಿವರಗಳನ್ನು ಪಡೆದ ರಾಜಗುರು ಅವರು, ಶೀಘ್ರದಲ್ಲೇ ತಾವು ಶಿವಮೊಗ್ಗಕ್ಕೆ ಸಂಗೀತ ಕಚೇರಿಗೆ ಹೊರಡುವುದಾಗಿಯೂ ಭವಿಷ್ಯದ ಶಿಷ್ಯ ರೈಲ್ವೆ ನಿಲ್ದಾಣದಲ್ಲಿ ತಮ್ಮನ್ನು ಭೇಟಿಯಾಗಬಹುದೆಂದೂ ತಿಳಿಸಿದರು. ಇದೆಲ್ಲವೂ ಹಠಾತ್ ಮತ್ತು ಅನಿರೀಕ್ಷಿತವಾಗಿತ್ತು.
‘ನನ್ನ ಗುರುಗಳ ಉದ್ದೇಶ ನನಗೆ ಅರ್ಥವಾಗಲಿಲ್ಲ, ನಾನು ಅವರನ್ನು ತುಂಬಾ ಪ್ರೀತಿಸುತ್ತಿದ್ದೆ. ಆದರೆ, ಪ್ರಶ್ನಿಸುವ ಧೈರ್ಯ ನನಗಿರಲಿಲ್ಲ, ಆದ್ದರಿಂದ ಅವರು ಹೇಳಿದಂತೆ ನಾನು ನಿಗದಿತ ಸಮಯಕ್ಕೆ ರೈಲು ನಿಲ್ದಾಣಕ್ಕೆ ಬಂದೆ. ಮೊದಲ ಕುದುರೆ ಟಾಂಗಾ ಬಂತು, ಎರಡನೆಯದು, ಮೂರನೆಯದು... ನಾನು ಚಡಪಡಿಸುತ್ತಿದ್ದೆ, ಕೊನೆಗೆ ಪಂಡಿತ್ ರಾಜಗುರು ಬಂದರು, ಬಹಳಷ್ಟು ಸಾಮಾನು ಸರಂಜಾಮುಗಳೊಂದಿಗೆ. ನಾನು ಟಾಂಗಾದ ಬಳಿಗೆ ಓಡಿದೆ. ನನ್ನನ್ನು ಪರಿಚಯಿಸಿಕೊಂಡು ಅವರ ಪಾದಗಳನ್ನು ಮುಟ್ಟಿದೆ. ‘ಎಲ್ಲಾ ಸಾಮಾನುಗಳನ್ನು ಸರಿಯಾಗಿ ಪ್ಲಾಟ್ಫಾರ್ಮ್‌ನಲ್ಲಿ ಇರಿಸಿ’ ಎಂದು ಅವರು ಹೇಳಿದರು. ನಾನು ವಿಸ್ಮಯ, ಆತಂಕದಿಂದ ನಡುಗುತ್ತಿದ್ದೆ. ಶಿವಮೊಗ್ಗಕ್ಕೆ ಹೋದೆವು. ಅಲ್ಲಿ ಸಂಜೆ ಸಂಗೀತ ಕಛೇರಿ. ತಂಬೂರಿ ಸಾಥ್‌ಗಾಗಿ ನನ್ನನ್ನೂ ಕೂಡ್ರಿಸಿಕೊಂಡರು. ಅವರು ಹಾಡುವಾಗ ದನಿಗೂಡಿಸಲು ಅವಕಾಶ ಕೊಡುತ್ತಿದ್ದರು. ಹಾಡು ಅನ್ನುತ್ತಿದ್ದರು. ಹೊಸ ಅನುಭವಕ್ಕೆ ತೆರೆದುಕೊಳ್ಳುತ್ತಿದ್ದೇನೆ ಎಂದುಕೊಳ್ಳುತ್ತಿರುವಾಗ ಒಂದು ಹಂತದಲ್ಲಿ ಅವರು ತಿರುಗಿ ನೋಡಿದರು. ನಾನು ಕುಳಿತ ಭಂಗಿ ಅವರಿಗೆ ಇಷ್ಟವಾಗಲಿಲ್ಲ.
‘ಏಯ್ ಮೂತಿ ಹಂಗ್ ಇಟ್ಕೋತಾರೇನು?’ ಎಂದು ನನ್ನ ಕತ್ತನ್ನು, ಮುಖವನ್ನು ಸರಿಪಡಿಸಿದರು. ಇಡೀ ಸಭೆ ಗೊಳ್ಳೆಂದು ನಕ್ಕಿತು. ಅವಮಾನ ತಡೆಯಲಾರದೇ ಮೌನವಾದೆ. ಕಛೇರಿ ಮುಗಿದ ನಂತರ ದೊಡ್ಡ ನಮಸ್ಕಾರ ಹಾಕಿ ಹೊರಡುವ ಆಲೋಚನೆ ಮಾಡತೊಡಗಿದೆ. ಕಛೇರಿ ಮುಗಿಯಿತು. ರೂಮಿಗೆ ಹೋಗಿ ಕುಳಿತಿದ್ದೆ. ಕೆಲವೇ ಕ್ಷಣಗಳಲ್ಲಿ ರಾಜಗುರು ಅವರು ಸ್ವತಃ ಹಣ್ಣು -ಹಂಪಲುಗಳೊಂದಿಗೆ ನನ್ನ ಕೊಠಡಿಗೆ ಬಂದರು. ‘ನೀನು ಛೊಲೋ ಹಾಡತೀಯಪಾ, ಕಂಠಾನೂ ಪಸಂದದ... ಆದರೆ ಶರೀರದಾಗ ಭಾಳ ಸಣ್ಣ ಇದೀಯ, ಸರಿಯಾಗಿ ತಿನ್ನಬೇಕು ನೀನು’ ಎಂದರು. ಹಾಲು ತರಿಸಿದರು, ಹಣ್ಣುಗಳನ್ನು ಕೊಟ್ಟರು. ನಾನು ತಿಂದು ಮುಗಿಸುವವರೆಗೂ ಅಲ್ಲೇ ಕುಳಿತು ಮಾತನಾಡಿದರು. ಶಿಷ್ಯನಿಗೆ ಬೇಜಾರಾಗಿದೆ ಎಂಬುದನ್ನು ಅರ್ಥಮಾಡಿಕೊಂಡು ಅವರು ಸಂತೈಸಿದ ರೀತಿ ಇದೆಯಲ್ಲ, ಅದರಿಂದ ನಾನು ಭಾವುಕನಾದೆ. ಗುರುಗಳ ಮೇಲಿನ ಪ್ರೀತಿ ಒಂದೇ ಸಲಕ್ಕೆ ನೂರು ಪಟ್ಟು ಜಾಸ್ತಿಯಾಯಿತು!
ನಂತರ 1976ರಿಂದ ಸುಮಾರು ಒಂದೂವರೆ ದಶಕಗಳ ಕಾಲ ರಾಜಗುರು ಅವರು ತಮ್ಮ ಅತಿದೊಡ್ಡ ಸಂಗೀತ ಭಂಡಾರದಿಂದ ಅತ್ಯುತ್ತಮ ರಚನೆಗಳನ್ನು ಪರಮೇಶ್ವರ ಅವರಿಗೆ ಪ್ರೀತಿಯಿಂದ ಕಲಿಸಿಕೊಟ್ಟರು. ಪರಮೇಶ್ವರ ಹೆಗಡೆ ಈಗ ಆಕಾಶವಾಣಿಯ ‘ಎ-ಟಾಪ್’ ಶ್ರೇಣಿಯ ಕಲಾವಿದ. ಹಲವಾರು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ನಿವಾಸಿ. ಭಾರತದಾದ್ಯಂತ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ ಹಾಡಿದ್ದಾರೆ. ಅಮೆರಿಕ, ಕೆನಡಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಗಲ್ಫ್ ರಾಷ್ಟ್ರಗಳಿಗೆ ಸಂಗೀತ ಪ್ರವಾಸ ಕೈಗೊಂಡಿದ್ದಾರೆ.
ವೈವಿಧ್ಯಮಯ ಕಛೇರಿ
ಗುರುಗಳ ಹೆಸರಿನಲ್ಲಿ ಬೆಳಗಿನ ರಾಗಗಳನ್ನು ಕೇಳುವ ಸಲುವಾಗಿ ರಾಜಗುರು ಸ್ಮೃತಿ ಕಛೇರಿಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಸುರ್ ಪ್ರಭಾತ್ ಎಂಬ ವಾರ್ಷಿಕ ಸಂಗೀತ ಸಮಾರೋಹ ಹಾಗೂ ಪರಂಪರಾ ಎಂಬ ಮತ್ತೊಂದು ಕಾರ್ಯಕ್ರಮ... ಒಟ್ಟು ಮೂರು ವೈವಿಧ್ಯಮಯ ಕಛೇರಿಗಳನ್ನು ಪ್ರತಿವರ್ಷ ಆಯೋಜಿಸುತ್ತಿದ್ದಾರೆ. ಮುಂದಿನ ಪೀಳಿಗೆಗಾಗಿ ‘ರಾಗ ಅನುರಾಗ’ ಎಂಬ ಆಲ್ಬಂ ಅನ್ನು ಮೂರು ಆವೃತ್ತಿಯಲ್ಲಿ ಹೊರತಂದಿದ್ದಾರೆ. ಮಹತ್ವದ ಸಂಗತಿಯೆಂದರೆ ಅವರು ಸ್ಥಾಪಿಸಿರುವ ಪರಮೇಶ್ವರ ಹೆಗಡೆ ಸಂಗೀತ ಅಕಾಡೆಮಿ ಮೂಲಕ ಸಾಂಪ್ರದಾಯಿಕ ಕಲಿಕೆ ಮತ್ತು ಕಲಿಸುವಿಕೆಯನ್ನು ಮುಂದುವರಿಸಿದ್ದಾರೆ. ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾಶ್ರೀ ಸೇರಿದಂತೆ ಅನೇಕ ಗೌರವಗಳು ಸಂದಿವೆ. ಈ ಸಂಗೀತ ಪರಮೇಶ್ವರನಿಗೆ ಎಪ್ಪತ್ತನೇ ಜನ್ಮದಿನದ ಶುಬಾಶಯಗಳು.
- ಡಾ. ರವೀಂದ್ರ ಕಾಟೋಟಿ, ಪ್ರಸಿದ್ಧ ಹಾರ್ಮೋನಿಯಂ ವಾದಕರು
‘ಸ್ವರ ಸಪ್ತತಿ’ ಗೌರವ
ಹಿಂದೂಸ್ತಾನಿ ಸಂಗೀತದ ಸುಪ್ರಸಿದ್ಧ ಗಾಯಕ ಪಂಡಿತ ಪರಮೇಶ್ವರ ಹೆಗಡೆ ಅವರಿಗೆ ಈಗ 70 ವರ್ಷ. ಈ ಸಂದರ್ಭದಲ್ಲಿ ‘ಸ್ವರ ಸಪ್ತತಿ’ ಎಂಬ ವಿಶೇಷ ಗೌರವಾರ್ಪಣೆ ಕಾರ್ಯಕ್ರಮವನ್ನು ಅವರ ಶಿಷ್ಯವೃಂದ ಹಾಗೂ ಅಭಿಮಾನಿಗಳು ಮಾರ್ಚ್ 14 ರಂದು ಆಯೋಜಿಸಿದ್ದಾರೆ. ಸಂಜೆ 5.30ಕ್ಕೆ ಬೆಂಗಳೂರಿನ ಭಾರತೀಯ ವಿದ್ಯಾ ಭವನದ ಖಿಂಚಾ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಡಾ. ದತ್ತಾತ್ರೇಯ ವೇಲಂಕರ್ ಅವರು ರಚಿಸಿರುವ ‘ಗಾನ ತಪಸ್ವಿ - ಪಂಡಿತ್ ಪರಮೇಶ್ವರ ಹೆಗಡೆ’ ಎಂಬ ಕೃತಿ ಲೋಕಾರ್ಪಣೆಯಾಗಲಿದೆ. ನಂತರ ಖ್ಯಾತ ಹಿಂದೂಸ್ತಾನಿ ಗಾಯಕಿ ವಿದುಷಿ ಶುಭಾ ಮುದ್ಗಲ್ ಗಾಯನವಿದ್ದು, ಪಂ. ಅನೀಶ ಪ್ರಧಾನ್ ಮತ್ತು ಪಂ. ಸುಧೀರ್ ನಾಯಕ್ ತಬಲಾ ಮತ್ತು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಸಮಾರಂಭದಲ್ಲಿ ಗಣ್ಯರಾದ ಪಂ. ವಿನಾಯಕ ತೊರವಿ, ಪಂ. ರವೀಂದ್ರ ಯಾವಗಲ್, ಪಂ. ನಾಗರಾಜರಾವ್ ಹವಾಲ್ದಾರ್, ಸಾಹಿತಿ ಎಸ್. ದಿವಾಕರ್, ಕುಮಾರ ಬಂಗಾರಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.