ಚಿಕ್ಕಮಗಳೂರು: ಸಂಗೀತ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವ ವಿಶಿಷ್ಟ ಪ್ರಕಾರ. ಇದಕ್ಕೊಂದು ದೃಢವಾದ ಧ್ಯೇಯವಿದೆ. ಇದರಿಂದ ಹೊಸ ಕಲಾವಿದರು ಪ್ರೋತ್ಸಾಹ ಪಡೆಯುತ್ತಿದ್ದಾರೆ ಎಂದು ನಟ ರಮೇಶ್ ಭಟ್ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸುಗಮ ಸಂಗೀತ ಗಂಗಾ, ಕರ್ನಾಟಕ ಸುಗಮ ಸಂಗೀತ ಪರಿಷತ್, ಲಯನ್ಸ್ ಸಂಸ್ಥೆ ಹಾಗೂ ಕಲ್ಕಟ್ಟೆ ಪುಸ್ತಕದಮನೆ, ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್,ಯುರೇಕಾ ಅಕಾಡೆಮಿ ಆಶ್ರಯದಲ್ಲಿ ಪೂರ್ವಿ ಗಾನಯಾನ 100ರ ಪ್ರಯುಕ್ತ ಆಯೋಜಿಸಿದ್ದ ನಮ್ಮ ಹಾಡು ನಮ್ಮದು ಚಿತ್ರಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಂಗೀತಕ್ಕೆ ಸಾಧನೆ, ಪರಿಶ್ರಮ ಬೇಕು. ಪೂರ್ವಜನ್ಮದ ಸಂಸ್ಕಾರ ಬೇಕು. ಇವೆಲ್ಲ ಇದ್ದವರು ಮಾತ್ರ ಸಾಧನೆ ಮಾಡಲು ಸಾಧ್ಯ. ಸಂಗೀತ ನಮ್ಮೆಲ್ಲರ ಬದುಕಲ್ಲಿ ಶಾಶ್ವತವಾಗಿರುವ ಒಂದು ದೊಡ್ಡ ಮಾಧ್ಯಮ. ಈ ಪರಂಪರೆ ಮುಂದುವರಿಯಬೇಕು ಎಂದರು.
ನಮ್ಮ ಜೀವನದ ಜತೆಯಲ್ಲೇ ಸಂಗೀತ ಇದೆ. ಪುಟ್ಟ ಮಕ್ಕಳಾಗಿದ್ದಾಗ ಅಮ್ಮನ ಲಾಲಿ ಜೋಗುಳಗಳನ್ನು ಕೇಳಿದ್ದೀವಿ. ನಾವು ದೊಡ್ಡವರಾಗುತ್ತಾ ನಾವೇ ಸಂಗೀತ ಕಲಿಯುತ್ತೇವೆ. ಇಲ್ಲ ಕಲಿತವರನ್ನು ನೋಡಿ ಆನಂದಪಡುತ್ತೇವೆ. ಹೀಗಾಗಿ ಸಂಗೀತ ನಮಗೆ ಹೊಸದಲ್ಲ ಎಂದು ಹೇಳಿದರು.
ಸುಗಮ ಸಂಗೀತ ಗಂಗಾ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಸಂಗೀತಕ್ಕೆ ದೊಡ್ಡ ಶಕ್ತಿ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮಕ್ಕಳಲ್ಲಿ ಸಂಗೀತದ ಒಲವು ಮೂಡಿಸಬೇಕು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.
ಗಾಯಕ ಹಾಗೂ ಸಾಹಿತಿ ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆ ಮಾತನಾಡಿ, ಪೂರ್ವಿಗಾನಯಾನ 100ರ ಸಂಭ್ರಮಾಚರಣೆಗೆ ಕಾರಣರಾದ ಎಂ.ಎಸ್.ಸುಧೀರ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ಗಾಯಕ ಎಂ.ಎಸ್.ಸುಧೀರ್ ಅವರು ಪೂರ್ವಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ವಿಶೇಷ. ಈ ತಂಡ ಇನ್ನೂ ಹೆಚ್ಚು ಸಾಧನೆ ಮಾಡಲಿ ಎಂದು ಹಾರೈಸಿದರು.
ಯೂನಿವರ್ಸಲ್ ಕಾಫಿ ಫೌಂಡೇಷನ್‌ನ ಟ್ರಸ್ಟಿ ಎ.ಬಿ.ಸುದರ್ಶನ್ ಮಾತನಾಡಿ, ಉಡುಪಿಯಲ್ಲಿ ಕನಕದಾಸರ ಹಾಡಿನಿಂದ ಶ್ರೀಕೃಷ್ಣ ಹಿಂದೆ ತಿರುಗಿದ್ದಾನೆ. ಇದನ್ನು ಗಮನಿಸಿದರೆ ಸಂಗೀತ ಎಷ್ಟು ಪರಿಣಾಮಕಾರಿ ಎನ್ನುವುದು ಗೊತ್ತಾಗುತ್ತದೆ. ಸಂಗೀತ ಜೀವನದ ಒಂದು ಭಾಗ ಎಂದರು.
ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಸುಧೀರ್, ಗಾಯಕರಾದ ರಾಯನಾಯಕ್, ಸುಮಾ ಪ್ರಸಾದ್, ರೂಪಾ ನಾಯ್ಕ, ಪ್ರಮುಖರಾದ ವೀಣಾ ಅರವಿಂದ್ ಉಪಸ್ಥಿತರಿದ್ದರು.