ಚಿಕ್ಕಮಗಳೂರಲ್ಲಿ ಆಯೋಜಿಸಿದ್ದ ಭಾವ ಶ್ರಾವಣ ವರ್ಷ ಋತುಗಾನ ಸುಮಗ ಸಂಗೀತ ಗಾಯನ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಉದ್ಘಾಟಿಸಿದರು. ಡಾ. ಸಿ.ರಮೇಶ್, ಸಿ.ಆರ್.ಪ್ರೇಮ್‌ಕುಮಾರ್ ಇತರರಿದ್ದರು.  
ನ್ಯೂಸ್

ಸಂಗೀತ, ಸಾಹಿತ್ಯ ಒಂದೇ ನಾಣ್ಯದ ಎರಡು ಮುಖ

ಚಿಕ್ಕಮಗಳೂರು: ಕಲಾಸಕ್ತರು ಮುಖಾಮುಖಿ ಆಗುವ ಮೂಲಕ ಸಂಗೀತ, ಸಾಹಿತ್ಯವನ್ನು ಆಸ್ವಾದಿಸಬಹುದು. ಸಂಗೀತ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಶಂಕರಮಠ ಸಭಾಂಗಣದಲ್ಲಿ ನಾದ ಚೈತನ್ಯ, ರಾಗ ರಂಜಿನಿ ಸಂಗೀತ ಶಾಲೆ, ಹಿರಣ್ಮಯಿ ಸಾಂಸ್ಕೃತಿಕ ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾನುವಾರ ಆಯೋಜಿಸಿದ್ದ ಭಾವ ಶ್ರಾವಣ ವರ್ಷ ಋತುಗಾನ ಸುಗಮ ಸಂಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಂಪ್ರದಾಯಿಕ ಕಾರ್ಯಕ್ರಮಗಳು ಮಕ್ಕಳಿಗೆ ಸಂಸ್ಕಾರ ಕಲಿಸುತ್ತವೆ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕಿದೆ. ಮಕ್ಕಳಿಗೆ ಕಲೆ, ಸಾಹಿತ್ಯ, ಸಂಗೀತದ ಸಂಸ್ಕಾರ ಕಲಿಸಬೇಕಿದೆ. ಪಾಲಕರು ತಮ್ಮ ಮಕ್ಕಳನ್ನು ಮೊಬೈಲ್, ಟಿವಿಗಳಿಂದ ದೂರವಿಟ್ಟು ಸಂಗೀತ, ಕಲೆ, ಸಾಹಿತ್ಯ ಕಾರ್ಯಕ್ರಮಗಳ ಕಡೆಗೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ನಾದ ಚೈತನ್ಯ ಸಂಸ್ಥೆ ಅಧ್ಯಕ್ಷ ಸಿ.ಆರ್.ಪ್ರೇಮ್‌ಕುಮಾರ್ ಮಾತನಾಡಿ, ವೈಚಾರಿಕ ಹಾಗೂ ಸಾಂಸ್ಕೃತಿಕ ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪಾಲಕರ ಮೇಲಿದೆ. ಆದರೆ ಪಾಲಕರಿಗೇ ಮೊಬೈಲ್ ಗೀಳು ಅಂಟಿರುವುದರಿಂದ ಮಕ್ಕಳೂ ಅದನ್ನೇ ಕಲಿಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿ.ರಮೇಶ್ ಮಾತನಾಡಿ, ಕಲಾವಿದರಿಗೆ ಅವಕಾಶ ನೀಡುವುದು ನಮ್ಮ ಜವಾಬ್ದಾರಿ. ಸಾಂಸ್ಕೃತಿಕ ಚಟುವಟಿಕೆ ಉದ್ದೇಶಕ್ಕೆ ಯಾವುದೇ ಹೊಸ ಸಂಸ್ಥೆಗಳು ಹುಟ್ಟಿಕೊಂಡಲ್ಲಿ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಗಾಯಕರಾದ ರೆೇಖಾ ಪ್ರೇಮ್‌ಕುಮಾರ್, ಹಿರೇನಲ್ಲೂರು ಶ್ರೀನಿವಾಸ್, ರಂಜಿತಾ ಕೊಪ್ಪ, ರಮ್ಯಾ ರಾವ್, ಪ್ರಸನ್ನ ಲಕ್ಷ್ಮೀ, ವಾಸಂತಿ, ದಿವ್ಯಾ ಸುರೇಶ್ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಹಿರಿಯ ನಾಗರಿಕ ವೇದಿಕೆ ಸಂಚಾಲಕ ಕುಬೇರ ಇತರರಿದ್ದರು.