ಬೆಂಗಳೂರು: ಮದ್ಯದ ಅಮಲಿನಲ್ಲಿ ರಸ್ತೆಬದಿ ಮಲಗಿದ್ದವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡುತ್ತಿದ್ದ ಆರೋಪಿಯನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ, ಒಂದೇ ವಾರದಲ್ಲಿ ಬನಶಂಕರಿ ಮತ್ತು ಸಿಟಿ ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಕೊಲೆ ಪ್ರಕರಣ ಬೆಳಕಿಗೆ ಬಂದಿವೆ.
ಸುಬ್ರಹ್ಮಣ್ಯಪುರದ ವಸಂತಪುರ ಗುಡ್ಡ ನಿವಾಸಿ ಗಿರೀಶ್ ಅಲಿಯಾಸ್ ಗಿರಿ (26) ಬಂಧಿತ. ಇದೇ ತಿಂಗಳು 12ರಂದು ಜಯನಗರ 7ನೇ ಹಂತದಲ್ಲಿ ರಸ್ತೆಬದಿಯಲ್ಲಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ. ಇದರ ತನಿಖೆ ಕೈಗೊಂಡಾಗ ಆರೋಪಿ ಸೆರೆಸಿಕ್ಕಿದ್ದಾನೆ. ಈತನ ವಿಚಾರಣೆ ವೇಳೆ, 18ರಂದು ಸಿಟಿ ಮಾರ್ಕೆಟ್ ಹಿಂಭಾಗದ ಕಾಂಪ್ಲೆಕ್ಸ್‌ನಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಹ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
10 ವರ್ಷಗಳ ಹಿಂದೆ ಗಿರೀಶ್, ತಂದೆ ಪತ್ನಿ ಮತ್ತು ಮಕ್ಕಳನ್ನು ಬಿಟ್ಟು ಬೇರೊಂದು ಮದುವೆ ಆಗಿದ್ದರು. ಇತ್ತ ವಸಂತನಗರದಲ್ಲಿ ತಾಯಿ ಮತ್ತು ಸಹೋದರಿ ಜೊತೆಗೆ ಗಿರೀಶ್ ನೆಲೆಸಿದ್ದ. ಇತ್ತೀಚೆಗೆ ತಾಯಿ ಮತ್ತು ತಂಗಿ ಮನೆಯನ್ನು ಮಾರಾಟ ಮಾಡಿ ಕೇರಳಕ್ಕೆ ಹೋಗಿ ನೆಲೆಸಿದ್ದಾರೆ.
ಬೆಂಗಳೂರಿನಲ್ಲೇ ಉಳಿದುಕೊಂಡ ಗಿರೀಶ್, 2015ರಿಂದಲೇ ಸ್ನೇಹಿತರ ಜತೆಗೆ ಸೇರಿಕೊಂಡು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ಸುಬ್ರಹ್ಮಣ್ಯಪುರ ಮತ್ತು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆಯೇ ಹಲ್ಲೆ, ಲೈಂಗಿಕ ದೌರ್ಜನ್ಯ, ದರೋಡೆಗೆ ಸಂಚು ಸೇರಿ 4 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಹಲ್ಲೆ ಕೇಸಿನಲ್ಲಿ 10 ತಿಂಗಳು ಸಜೆ ಕೂಡ ಅನುಭವಿಸಿ 2020ರಲ್ಲಿ ಬಿಡುಗಡೆಯಾಗಿ ಗಾರೆ ಕೆಲಸ, ಹೋಟೆಲ್‌ನಲ್ಲಿ ಹೆಲ್ಪರ್ ಮತ್ತು ಮಾರ್ಕೆಟ್‌ನಲ್ಲಿ ಸಣ್ಣಪುಟ್ಟ ಕೂಲಿ ಕೆಲಸ ಮಾಡುತ್ತಿದ್ದ.
ಇದಾದ ನಂತರ ಮಾರ್ಕೆಟ್, ಮೆಜೆಸ್ಟಿಕ್, ರೈಲ್ವೆ ನಿಲ್ದಾಣಗಳಲ್ಲಿ ಮಲಗಿಕೊಳ್ಳುವ ಮತ್ತು ಮದ್ಯಪಾನ ಮಾಡಿ ರಸ್ತೆಬದಿ ಮಲಗುವರ ಬ್ಯಾಗ್, ಮೊಬೈಲ್ ಮತ್ತು ಇತರ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ. ಒಂಟಿಯಾಗಿ ಓಡಾಡುವವರನ್ನು ಬೆದರಿಸಿ ಅವರಿಂದ ಹಣ ಮತ್ತು ಮೊಬೈಲ್ ಕಳವು ಮಾಡುತ್ತಿದ್ದ. ರಸ್ತೆಬದಿ ಮಲಗಿದ್ದವರ ತಲೆಮೇಲೆ ಕಲ್ಲು ಎತ್ತಿಹಾಕಿ ಕೈಗೆ ಸಿಕ್ಕ ವಸ್ತು ದೋಚುತ್ತಿದ್ದ.
ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ನೇತೃತ್ವದ ತಂಡ, ಕೃತ್ಯ ನಡೆದ ಸ್ಥಳದಲ್ಲಿ ಸಿಕ್ಕ ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ತನಿಖೆ ಕೈಗೊಂಡಿದ್ದರು. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಹಳೆಯ ಆರೋಪಿಗಳ ಪಟ್ಟಿಯಲ್ಲಿನ ೆ ಗಿರೀಶ್ ಮುಖಚಹರೆ ಹೊಂದಾಣಿಕೆ ಆಗಿದ್ದು, ನಗರದ ಎಲ್ಲೆಡೆ ಹುಡುಕಾಟ ನಡೆಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.